ಮಂಗಳೂರು : ನವಮಂಗಳೂರು ಬಂದರಿಗೆ ಪ್ರಸ್ತುತ ಋತುವಿನ ಐದನೇ ಪ್ರವಾಸಿ ಹಡಗು MS NAUTICA ಆಗಮಿಸಿತು. ಐದನೇ ಕ್ರೂಸ್ ಹಡಗಿನಲ್ಲಿ 550 ಪ್ರಯಾಣಿಕರು ಮತ್ತು 400 ಸಿಬ್ಬಂದಿ ಇದ್ದರು. ಬರ್ತ್ ನಂಬರ್ 04 ರಲ್ಲಿ ಲಂಗರು ಹಾಕಿತು. ಹಡಗಿನ ಒಟ್ಟಾರೆ ಉದ್ದ 180.5 ಮೀಟರ್ ಇದ್ದು 30,277 ಒಟ್ಟು ಟನ್ ಸಾಗಾಟ ಸಾಮರ್ಥ್ಯ ಮತ್ತು 6.0 ಮೀಟರ್ಗಳ ಆಳ ಹೊಂದಿದೆ.
ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಹಡಗು ಮಸ್ಕತ್ನಿಂದ ಭಾರತಕ್ಕೆ ಬಂದಿದೆ. ಮುಂಬೈ ಮತ್ತು ಮರ್ಮಗೋವಾ ಬಳಿಕ ಮಂಗಳೂರಿಗೆ ಆಗಮಿಸಿದೆ. ಪ್ರವಾಸಿ ಹಡಗಿನಲ್ಲಿ ಬಂದ ಪ್ರಯಾಣಿಕರಿಗೆ ಯಕ್ಷಗಾನ ಮತ್ತು ಸಾಂಪ್ರದಾಯಿಕ ಡೋಲು (ಚಂಡೆ) ಮುಂತಾದ ಜಾನಪದ ಕಲಾತಂಡಗಳ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು. ಕ್ರೂಸ್ ಪ್ರಯಾಣಿಕರಿಗೆ ಆಹ್ಲಾದಕರ ಅನುಭವಕ್ಕಾಗಿ ವಿವಿಧ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್ಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರಯಾಣಿಕರಿಗೆ 2 ಶಟಲ್ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.