ಮಂಗಳೂರು: ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಶಿಕ್ಷಕಿಯೋರ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರಲ್ಲಿ ಭೀಕರ ಅಪಘಾತ ಪ್ರಕರಣ: ಲಾರಿ ಚಾಲಕ ಬಂಧನ - ಕದ್ರಿ ಅಪಘಾತ ಪ್ರಕರಣದ ಲಾರಿ ಡ್ರೈವರ್ ಬಂಧನ
ಮಂಗಳೂರಿನ ಕದ್ರಿ ಬಳಿ ಆಟೋಗೆ ಲಾರಿ ಡಿಕ್ಕಿ ಹೊಡೆದು ಶಿಕ್ಷಕಿ ಸಾವಿನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಾರಿ ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡೆಸಲಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ನಿವಾಸಿ ಸಿದ್ದಲಿಂಗನಗೌಡ ಪೊಲೀಸ್ ಪಾಟೀಲ್ (29) ಬಂಧಿತ ಆರೋಪಿ. ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶೈಲಜಾ, ನಿನ್ನೆ ಮಧ್ಯಾಹ್ನ ಕದ್ರಿ ಕಂಬಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರು ಪ್ರಯಾಣಿಸುತ್ತಿದ್ದ ಆಟೋಗೆ ಎದುರಿನಿಂದ ಬರುತ್ತಿದ್ದ ಲಾರಿ ಕದ್ರಿ ಕಂಬಳದಲ್ಲಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಶೈಲಜಾ ಮೃತಪಟ್ಟರೆ, ರಿಕ್ಷಾ ಚಾಲಕ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಘಾತ ನಡೆಸಿದ ಲಾರಿ ಚಾಲಕ ಸಿದ್ದಲಿಂಗನಗೌಡನನ್ನು ಕದ್ರಿ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಸಿದ್ದಲಿಂಗನಗೌಡನಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.