ಮಂಗಳೂರು :ಅಜ್ಜನ ಮರಣ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ ವ್ಯಕ್ತಿಯಲ್ಲಿ 13 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಘಟನೆಯ ಹಿನ್ನೆಲೆ:ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದಲ್ಲಿ ಒಟ್ಟು 42 ಸೆಂಟ್ಸ್ ಜಮೀನು ಇದ್ದು, ಈ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ತನ್ನ ನೆರೆ ಮನೆಯವರಿಗೆ ಮಾರಾಟ ಮಾಡಲು ಈ ವ್ಯಕ್ತಿಯೊಬ್ಬರು ತೀರ್ಮಾನಿಸಿದ್ದರು.
ಈ ಬಗ್ಗೆ ದಾಖಲಾತಿಗಳನ್ನು ತಯಾರು ಮಾಡಿ ಜಮೀನನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ವಿಚಾರಿಸಿದಾಗ, ಅಜ್ಜನ ಮರಣ ಪ್ರಮಾಣ ಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಂಡು ಬನ್ನಿ ಎಂದು ತಿಳಿಸಿದ್ದರು. ಅದರಂತೆ ದೂರುದಾರರು ಸೆಪ್ಟೆಂಬರ್ ತಿಂಗಳಿನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ತನ್ನ ಅಜ್ಜನ ಮರಣದ ದೃಢಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ನಂತರ ದೂರುದಾರರು ಎರಡು ಮೂರು ಸಲ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ದೃಢೀಕರಣ ಪತ್ರದ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಯಲ್ಲಿ ವಿಚಾರಿಸಿದ್ದು, ಯಾವುದೇ ಉತ್ತರ ನೀಡಿರಲಿಲ್ಲ. ನಂತರ ನವೆಂಬರ್ 20 ರಂದು ಗ್ರಾಮ ಆಡಳಿತ ಅಧಿಕಾರಿಯವರ ಮೊಬೈಲ್ ನಂಬರಿಗೆ ಕಾಲ್ ಮಾಡಿ ದೂರುದಾರರು ಮಾತನಾಡಿದ್ದರು. ಆಗ ಆ ಕಡೆ ಫೋನ್ ನಲ್ಲಿ ಮಾತನಾಡಿದ ಅಧಿಕಾರಿ ’’ನಿಮ್ಮ ಅಜ್ಜನ ಮರಣದ ದೃಢೀಕರಣ ಪತ್ರ ರೆಡಿ ಇದೆ, ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಬನ್ನಿ, ಬರುವಾಗ 15,000/ರೂ. ತೆಗೆದುಕೊಂಡು ಬನ್ನಿ ಎಂದು ತಿಳಿಸಿದ್ದರು‘‘. ಆದರೆ ಅಷ್ಟು ಹಣ ತನ್ನಲ್ಲಿ ಇಲ್ಲ ಎಂದಾಗ ನಾಳೆ ಆದ್ರು ತಂದುಕೊಡಿ ಎಂದು ತಿಳಿಸಿದ್ದರಂತೆ. ಆಗ ದೂರುದಾರರು ಅಷ್ಟು ಹಣ ನನ್ನಲ್ಲಿ ಇಲ್ಲ ಎಂದು ತಿಳಿಸಿದ್ದರು‘‘.