ಕರ್ನಾಟಕ

karnataka

ETV Bharat / state

'ಅಹಿಂಸಾ ಪರಮೋಧರ್ಮ'... ಜೈನ ಮುನಿಗಳ ಜೀವನದ ಸುತ್ತ ಒಂದು ನೋಟ!

ಮಹಾ ತಪಸ್ವಿ ಜೈನ ಮುನಿಗಳು ಸ್ವತಃ ಬಾಹುಬಲಿ ಸ್ವಾಮಿಯಂತೆ ಇವರೂ ದಿಗಂಬರರು. 'ಅಹಿಂಸಾ ಪರಮೋಧರ್ಮ'ವೆಂದು ನಂಬಿರುವ ಈ ದಿಗಂಬರ ಮುನಿಗಳ ಜೀವನದ ಚರಿತ್ರೆ.

ಜೈನ ಮುನಿಗಳ ಜೀವನದ ಸುತ್ತ ಒಂದು ನೋಟ

By

Published : Feb 19, 2019, 1:06 PM IST

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾಮಸ್ತಕಾಭಿಷೇಕದ ಕೇಂದ್ರ ಬಿಂದುಗಳಾಗಿದ್ದವರು ಮಹಾ ತಪಸ್ವಿ ಜೈನ ಮುನಿಗಳು. ಸ್ವತಃ ಬಾಹುಬಲಿ ಸ್ವಾಮಿಯಂತೆ ಇವರೂ ದಿಗಂಬರರು. 'ಅಹಿಂಸಾ ಪರಮೋಧರ್ಮ'ವೆಂದು ನಂಬಿರುವ ಈ ದಿಗಂಬರ ಮುನಿಗಳ ಜೀವನದ ಕಥೆ ನಿಮ್ಮನ್ನ ಒಂದು ಕ್ಷಣ ಆಶ್ಚರ್ಯಗೊಳಿಸುತ್ತದೆ.

ಇವರು ಅನುಸರಿಸುವ ಕಠಿಣ ಜೀವನ ಕ್ರಮ ವಿಶೇಷ ಹಾಗೂ ವಿಭಿನ್ನ. ಎಲ್ಲವನ್ನೂ ತೊರೆದು, ಕೊನೆಗೆ ತಾವು ಧರಿಸಿದ ಬಟ್ಟೆಯನ್ನೂ ತ್ಯಾಗ ಮಾಡಿ, ಅನ್ನ ಆಹಾರಾದಿಗಳನ್ನೂ ತೊರೆದು ಕಡು ಕಷ್ಟವಾದ ವೃತಾಚರ್ಯೆಯನ್ನು ಜೈನ ಮುನಿಗಳು ಪಾಲಿಸುತ್ತಾರೆ. ಶಾರೀರಿಕ ಸುಖಗಳನ್ನ ತ್ಯಜಿಸಿ ಅರಿಷಡ್ವರ್ಗಗಳನ್ನು ಜಯಿಸಿದ ಈ ದಿಗಂಬರ ಮುನಿಗಳಿಗೆ ನಿಶ್ಚಿತ ನೆಲೆ ಎಂಬುವುದು ಇಲ್ಲ.


ಚಾತುರ್ಮಾಸದ ಸಂದರ್ಭ ಹೊರತುಪಡಿಸಿದರೆ ನಿತ್ಯವೂ ಧರ್ಮಪ್ರಚಾರಕ್ಕಾಗಿ ಪಾದಚಾರಿಗಳಾಗಿ ಸದಾ ಸಂಚಾರಿಸುತ್ತಲೇ ಇರುತ್ತಾರೆ. ಗುಂಪು ಗುಂಪಾಗಿ ಸಂಚರಿಸುತ್ತಾ ಧರ್ಮ ಪ್ರಚಾರ ಮಾಡುತ್ತಾ ಸದಾ ಮೋಕ್ಷ ಪಥಿಕರಾಗಲು ಬಯಸುತ್ತಿರುತ್ತಾರೆ. ಹಗಲು ಪೂರ್ತಿ ಕಾಲ್ನಡಿಗೆಯಲ್ಲಿ ಸಂಚರಿಸುವ ಈ ಜೈನಮುನಿಗಳಿಗೆ ರಾತ್ರಿ ಸಂಚಾರ ನಿಷಿದ್ಧ. ಆದ್ದರಿಂದ ಸಂಜೆಯಾಗುತ್ತಲೇ ಕಾಲ್ನಡಿಗೆ ನಿಲ್ಲಿಸಿ ಎಲ್ಲಾದರೂ ವಾಸ್ತವ್ಯ ಹೂಡುತ್ತಾರೆ.

ದಿನಕ್ಕೆ ಕಡಿಮೆ ಅಂದರೆ ಸುಮಾರು 30 ರಿಂದ 40 ಕಿ.ಮೀ. ನಡೆಯುತ್ತಾರೆ ಮುನಿಗಳು. ರಾತ್ರಿ ಮಾತನಾಡುವುದು ಇವರಿಗೆ ನಿಷಿದ್ಧ. ಕೇವಲ ಧ್ಯಾನನಿರತರಾಗಿ ಮಲಗುತ್ತಾರೆ. ಅದೂ ಹುಲ್ಲಿನ ಮೇಲೆ, ಹಲಗೆಯ ಮೇಲೆ. ಇನ್ನು ಆಹಾರ ಸೇವನೆಯಲ್ಲಿ ತಮ್ಮದೇಯಾದ ನಿಯಮಾದಿಗಳಿವೆ.

ದಿನದ ಒಂದು ಹೊತ್ತು ಮಾತ್ರ ಊಟ ಮಾಡುವ ಮುನಿಗಳು, ಸೂರ್ಯೋದಯಕ್ಕಿಂತ ಮೊದಲಿಗೇ ಆಹಾರ ಸೇವನೆ ಮಾಡುತ್ತಾರೆ. ಆಹಾರವನ್ನು ಸೇವಿಸುವ ಕ್ರಮವೂ ಕೂಡಾ ಬಹಳ ವಿಶಿಷ್ಟವಾಗಿದೆ. ಜೈನ ಮುನಿಗಳು ಪಾತ್ರೆಗಳನ್ನು ಬಳಸುವಂತಿಲ್ಲ. ಹೌದು, ಎರಡೂ ಕೈಗಳನ್ನು ಜೋಡಿಸಿ ಶ್ರಾವಕ-ಶ್ರಾವಿಕೆಯರು ನೀಡುವ ಹಾಲು, ಸೀಯಾಳ, ಫಲ ವಸ್ತುಗಳನ್ನು ನಿಂತುಕೊಂಡೇ ಸ್ವೀಕರಿಸುವ ಕ್ರಮ ನಿಜಕ್ಕೂ ನಮ್ಮನ್ನ ಆಶ್ಚರ್ಯಚಕಿತರನ್ನಾಗಿಸುತ್ತೆ.

ದಿನಕ್ಕೆ ಒಂದು ಬಾರಿ ಮಾತ್ರ ನೀರು, ಆಹಾರ ಸೇವನೆ ಮಾಡುವ ಮುನಿಗಳು ಮತ್ತೆ ಮರು ದಿನವೇ ಆಹಾರ ಸೇವನೆ ಮಾಡೋದು. ಅಲ್ಲದೆ ಆಹಾರ ಸೇವಿಸುವ ಸಂದರ್ಭ ಕಸ, ಕಡ್ಡಿ, ಕೂದಲು ಮುಂತಾದ ಅನ್ಯ ವಸ್ತುಗಳು ದೊರೆತರೆ ಅಲ್ಲಿಗೆ ಆಹಾರ ಸೇವನೆಯನ್ನು ತೊರೆಯುತ್ತಾರೆ. ಮತ್ತೆ ಅವರು ಮರುದಿನದವರೆಗೆ ಆಹಾರವನ್ನು‌ ಸೇವಿಸುವಂತಿಲ್ಲ.

ಇವರಲ್ಲಿ‌ ಕೆಲವರು‌ ಎರಡು ಮೂರು ದಿನಕ್ಕೊಮ್ಮೆ ಆಹಾರ ಸೇವಿಸುವ ಮುನಿಗಳಿದ್ದಾರೆ. ಶರೀರದ ಮೇಲಿನ ವ್ಯಾಮೋಹವನ್ನು ತ್ಯಜಿಸಿದ ಇವರಿಗೆ ಔಷಧ ಸೇವನೆಯೂ ನಿಷಿದ್ಧ, ಸ್ನಾನವೂ ನಿಷಿದ್ಧ.

ಕೈಯಲ್ಲಿ ನವಿಲು ಗರಿ ಹಿಡಿದುಕೊಂಡಿರುವ ಮುನಿಗಳು, ಅದರಿಂದಲೇ ತಾವು ಕುಳಿತುಕೊಳ್ಳುವ ಸ್ಥಳವನ್ನು ಸ್ವಚ್ಛಗೊಳಿಸಿ ಕುಳಿತುಕೊಳ್ಳುತ್ತಾರೆ.

ಅವರ ಮತ್ತೊಂದು ಕಠಿಣ ವೃತವೆಂದರೆ, ತಮ್ಮ 'ತಲೆಕೂದಲುಗಳನ್ನು ಕೈಯಿಂದಲೇ ಕಿತ್ತು ಹಾಕುವ ಕೇಶಲೋಚನ' ಎಂಬ ಕ್ಲಿಷ್ಟಕರವಾದ ಧಾರ್ಮಿಕ ಕ್ರಿಯೆಯನ್ನು ಮಾಡಿಕೊಳ್ಳುತ್ತಾರೆ.

ಮುನಿಯಾಗಿ ದೀಕ್ಷೆ ತೆಗೆದುಕೊಳ್ಳುವ ಮೊದಲಿಗೆ ಕೌಪೀನ, ಒಂದು ಬಟ್ಟೆಯನ್ನು ಹೊದ್ದುಕೊಳ್ಳುವ ಇವರು ಬಳಿಕ‌ ಎಲ್ಲವನ್ನೂ ತ್ಯಜಿಸಿ ಕಠಿಣ ವ್ರತ ನಿಯಮಗಳನ್ನು ಅನುಸರಿಸುತ್ತಾರೆ.

ಮುನಿಗಳ ಧರ್ಮನಿಷ್ಠೆ, ಕರ್ತವ್ಯ ಪ್ರಜ್ಞೆ, ನಡೆ ನುಡಿಗಳಿಂದ ಶ್ರೇಷ್ಠ ಸಂತರಾಗಿ, ಧರ್ಮ ಪ್ರಚಾರವೇ ತಮ್ಮ ಜೀವಿತ ಕಾಲದ ಮಹೋನ್ನತ ಕಾರ್ಯವೆಂದುಕೊಂಡ ಮುನಿಗಳ ಅಂತಿಮ ಘಳಿಗೆ ಮಾತ್ರ ವಿಶಿಷ್ಟವಾಗಿದೆ. ತಾವು ಆಹಾರ ತೆಗೆದುಕೊಳ್ಳಲು ಅಸಮರ್ಥರಾದಾಗ ತಮ್ಮ ಜೀವಿತದ ಕೊನೆಗಾಲ ‌ಸಮೀಪವಾಯಿತೆಂದು ಭಾವಿಸಿ ಆಹಾರವನ್ನು ತ್ಯಜಿಸಿ ಸಲ್ಲೇಖನ ವ್ರತವನ್ನು‌ ಆಚರಿಸಿ ಸಾವನ್ನು‌ ಆಹ್ವಾನಿಸಿ ತಮ್ಮನ್ನ ತಾವೇ ದೇವರಿಗೆ ಅರ್ಪಿಸಿಕೊಳ್ಳುತ್ತಾರೆ.

ABOUT THE AUTHOR

...view details