ಮಂಗಳೂರು:ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಬಿಲ್ಲವ, ಈಡಿಗ ಸೇರಿದಂತೆ 26 ಒಳಪಂಗಡಗಳು ಸಾರಾಸಗಟಾಗಿ ತಿರಸ್ಕಾರ ಮಾಡಿವೆ. ನಮಗೆ ಈ ಕೋಶದ ಅಗತ್ಯವಿಲ್ಲ. ನಿಜವಾಗಿಯೂ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ನಮ್ಮ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮವನ್ನು ಘೋಷಣೆ ಮಾಡಲಿ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಆಗ್ರಹಿಸಿದ್ದಾರೆ.
ಉನ್ನತ ಸ್ಥಾನದ ಅಧಿಕಾರಿ ನೇಮಕ:ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರು ಕೋಶ ಹಲ್ಲಿಲ್ಲದ ಹಾವು. ಇದಕ್ಕೊಂದು ಉನ್ನತ ಸ್ಥಾನದ ಅಧಿಕಾರಿಯನ್ನು ನೇಮಕ ಮಾಡಿದ್ದರೂ, ಅದಕ್ಕೆ ಸ್ವತಂತ್ರ ಅಧಿಕಾರ ಇರುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಸರ್ಕಾರದ ಕಾರ್ಯದರ್ಶಿಯ ಅನುಮತಿ ಬೇಕಾಗುತ್ತದೆ. ಅಲ್ಲದೆ ಈ ಕೋಶ ಒಂದು ಇಲಾಖೆಯ ಅಡಿಯಲ್ಲಿದ್ದು, ಯಾವಾಗ ಬೇಕಾದರೂ ಇದನ್ನು ವಾಪಸ್ ಪಡೆಯಬಹುದು ಎಂದು ಹೇಳಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಕೋಶವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದೆ. ನಿಗಮ ಹಾಗೂ ಕೋಶಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ನಿಗಮ ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ನಿಗಮಕ್ಕಿರುತ್ತದೆ. ಆದರೆ ಕೋಶದಿಂದ ಸಮುದಾಯದ ಯಾವ ಅಭಿವೃದ್ಧಿಯೂ ಆಗುವುದಿಲ್ಲ ಎಂದರು.