ಮಂಗಳೂರು: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ನನಗೆ ಪಕ್ಷ ನಿಷ್ಠೆ ಗೊತ್ತಿದೆ, ಬ್ಲ್ಯಾಕ್ಮೇಲ್ ಬಗ್ಗೆ ತಿಳಿದಿಲ್ಲ ಎಂದು ಟ್ವೀಟ್ ಮಾಡುತ್ತಾರೆ. ಹಾಗಾದರೆ ಸಂಪುಟ ವಿಸ್ತರಣೆ ಬ್ಲ್ಯಾಕ್ಮೇಲ್ ಮುಖಾಂತರ ಆಗಿದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಲಿ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಆಡಳಿದಲ್ಲಿರುವ ಸರಕಾರದ ಸದಸ್ಯರಾದ ಯತ್ನಾಳ್ ಅವರು ಸಿಡಿ ವಿಚಾರ ಮಾತನಾಡುತ್ತಾರೆ. ಮತ್ತೋರ್ವ ಯಾವ ಮಾನದಂಡದ ಮೇಲೆ ಸಚಿವ ಸಂಪುಟದಲ್ಲಿ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡುತ್ತಾರೆ. ಪ್ರಧಾನಿಗೆ ಅವಮಾನ ಮಾಡಿದರೆ ದೇಶದ್ರೋಹಿ. ಹಾಗಾದರೆ ಮುಖ್ಯಮಂತ್ರಿಯವರಿಗೆ ಏಕವಚನ ಬಳಸೋದು ಅವಮಾನವಲ್ಲವೇ. ಇದು ದೇಶದ್ರೋಹ ಅಲ್ಲವೇ ಎಂದು ಕೇಳಿದರು.
ಅಂಗಾರರಿಗೆ ಯಾಕೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಇಲ್ಲ...?
ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಅವರು ಸಚಿವರಾದದ್ದು ಸಂತೋಷ ತಂದಿದೆ. ಆದರೆ ದ.ಕ.ಜಿಲ್ಲೆಯ ಹಿರಿಯ ಶಾಸಕರಾಗಿರುವ ಅಂಗಾರ ಅವರನ್ನು ಕಡೆಗಣಿಸಿ ಪಕ್ಕದ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿರುವ ಬಗ್ಗೆ ಸರಕಾರ ಜಿಲ್ಲೆಯ ಜನತೆಗೆ ಸ್ಪಷ್ಟನೆ ನೀಡಲಿ ಎಂದು ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ದಲಿತ ಸಮುದಾಯದಿಂದ ಬಂದಿರುವ, ಹಿರಿಯ ಶಾಸಕರಾಗಿ 30-40 ವರ್ಷಗಳ ಅನುಭವವಿರುವ ಅಂಗಾರ ಅವರಿಗೆ ಇದೇ ಜಿಲ್ಲೆಯ ನೇತೃತ್ವ ಯಾಕೆ ಕೊಡಲಾಗುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಲಿ. ಜಿಲ್ಲೆಯ ಹಿರಿಯ ಶಾಸಕರಾಗಿರುವ ಅಂಗಾರ ಅವರಿಗೆ ಹಿಂದೆಯೂ ಬಹಳಷ್ಟು ಅನ್ಯಾಯವಾಗಿತ್ತು. ಕ್ಷೇತ್ರದ ಜನತೆಯ ಒತ್ತಡದ ಮೇರೆಗೆ ಇಂದು ಅವರಿಗೆ ಸಚಿವ ಸ್ಥಾನ ದೊರಕಿದೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅವರಿಂದ ಜನಮೆಚ್ಚುವಂತಹ ಕಾರ್ಯವಾಗಲಿ. ನಮ್ಮ ಸಂಪೂರ್ಣ ಸಹಕಾರ ಇರುತ್ತೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ತಾಪಂ ರದ್ದತಿ ಏಕೆ?
ಯಾರಲ್ಲೂ ಚರ್ಚೆ ಮಾಡದೆ ತಾಲೂಕು ಪಂಚಾಯತ್ ರದ್ದತಿ ಮಾಡಲಾಗುತ್ತದೆ ಎಂದು ಸಚಿವ ಸಂಪುಟದ ಸದಸ್ಯರು, ಮಂತ್ರಿಗಳು ಜನರ ಮಧ್ಯೆ ಗೊಂದಲ ಸೃಷ್ಟಿಸುತ್ತಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. 73ನೇ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋಗಲು ರಾಜ್ಯ ಸರಕಾರಕ್ಕೆ ಸಾಧ್ಯವಿದೆಯೇ. ಅದು ಅಸಂವಿಧಾನ ಆಗೋದಿಲ್ಲವೇ ಎಂದು ಪ್ರಶ್ನಿಸಿದ ಖಾದರ್, ಸಮರ್ಪಕವಾದ ಮಾಹಿತಿ ಇಲ್ಲದೇ ಜನರ ಮಧ್ಯೆ ಗೊಂದಲ ಸೃಷ್ಟಿ ಯಾಕೆ ಮಾಡಲಾಗುತ್ತದೆ ಎಂದು ಕೇಳಿದರು.
ಸರಕಾರಕ್ಕೆ ತಾಪಂ ರದ್ದತಿ ಮಾಡುವ ಆಲೋಚನೆ ಯಾಕೆ ಬಂತು ಎಂಬುದನ್ನು ಸ್ಪಷ್ಟಪಡಿಸಲಿ. ತಾಲೂಕು ಪಂಚಾಯತ್ ಇಲ್ಲದಿದ್ದಲ್ಲಿ ಅಭಿವೃದ್ಧಿ ಕಾರ್ಯವನ್ನು ಶಾಸಕರೇ ನೋಡಲಿದ್ದಾರೆಯೇ. ಕಾಂಗ್ರೆಸ್ ವಿಕೇಂದ್ರೀಕರಣ ಮಾಡಿ ಅಧಿಕಾರವನ್ನು ಹಂಚಿಕೆ ಮಾಡಿದರೆ, ಬಿಜೆಪಿ ಸರಕಾರ ಅದನ್ನು ಮತ್ತೆ ಕೇಂದ್ರೀಕರಣ ಮಾಡುತ್ತಿದೆ. ಗ್ರಾಪಂ ಅಭಿವೃದ್ಧಿಯನ್ನು ಜಿಲ್ಲಾ ಪಂಚಾಯತ್ಗೆ ನೋಡಲು ಸಾಧ್ಯವೇ. ತಾಲೂಕು ಮಟ್ಟದ, ಗ್ರಾಮ ಮಟ್ಟದ ಆಡಳಿತ, ಮೂಲ ಸೌಕರ್ಯ ಸಂಬಂಧಿತ ಮೇಲ್ವಿಚಾರಣೆ ನಡೆಸಲು ತಾಲೂಕು ಪಂಚಾಯತ್ ಅತ್ಯಗತ್ಯ. ತಾಲೂಕು ಪಂಚಾಯತ್ಗೆ ಈಗ 2 ಕೋಟಿ ರೂ. ಅನುದಾನ ಬರುತ್ತದೆ. ಅದನ್ನು 10 ಕೋಟಿ ರೂ.ಗೆ ಏರಿಸಿ ತಾಪಂ ಅನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಸರಕಾರದ ಜವಾಬ್ದಾರಿ ಇನ್ನಷ್ಟು ಗಟ್ಟಿಗೊಳಿಸುವುದೇ ಹೊರತು ರದ್ದತಿಯೇ ಪರಿಹಾರವಲ್ಲ ಎಂದರು.
ಮೀನುಗಾರಿಕೆಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ನೀಡಲಿ
ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಸೀಮೆ ಎಣ್ಣೆಯನ್ನು ರಾಜ್ಯ ಸರಕಾರ ಕಡಿಮೆ ಮಾಡುತ್ತಿದೆ. ಸಿದ್ದರಾಮಯ್ಯ ಸರಕಾರ ಇರುವಾಗ ತಿಂಗಳಿಗೆ 400 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿತ್ತು. ಬಿಜೆಪಿ ಸರಕಾರ ಬಂದ ಬಳಿಕ ಅದು 315ಕ್ಕೆ ಇಳಿಯಿತು. ಈಗ ಅದನ್ನು 130 ಲೀಟರ್ಗೆ ತಂದು ನಿಲ್ಲಿಸಿದ್ದಾರೆ. ಹಾಗಾದರೆ ಕೋಟ್ಯಂತರ ರೂ. ಬೋಟ್ ಇದ್ದವರು ಮೀನುಗಾರಿಕೆ ನಡೆಸಬೇಕು ಹೊರತು ಸಣ್ಣ ಬೋಟ್ಗಳು ಇರುವವರು ಮೀನುಗಾರಿಕೆ ಮಾಡಬಾರದು ಎಂಬುದು ಇವರ ಉದ್ದೇಶವೇ. ಆದ್ದರಿಂದ ಈ ಹಿಂದೆ ನಾವು ಕೊಟ್ಟಷ್ಟೇ ಸೀಮೆಎಣ್ಣೆ ನೀಡುವುದು ಸರಕಾರದ ಜವಾಬ್ದಾರಿ ಎಂದು ಖಾದರ್ ಹೇಳಿದರು.
ಬಿಜೆಪಿಯವರು ನಮ್ಮದು ಮೀನುಗಾರರ ಸರಕಾರ ಎಂದು ಹೇಳುತ್ತಾರೆ. ಇದು ಪ್ರಚಾರದ ಸರಕಾರವಲ್ಲದೇ ಜನರಿಗೆ ಪ್ರಯೋಜನ ಆಗುವ ಯಾವ ಯೋಜನೆಯನ್ನು ತರುವ ಸರಕಾರವಲ್ಲ. ಉಚ್ಚಿಲದಲ್ಲಿ ಮೀನುಗಾರರು ಇರುವ ಪ್ರದೇಶದಲ್ಲಿ ಕಡಲ್ಕೊರೆತಕ್ಕೆ ರಸ್ತೆ ಹೋಯಿತು. ಆ ರಸ್ತೆ ನಿರ್ಮಾಣಕ್ಕೆ ಪಿಡಬ್ಲ್ಯೂಡಿ ಮೂಲಕ 50 ಲಕ್ಷ ರೂ. ಅನುದಾನ ನೀಡಿ ಟೆಂಡರ್ ಆಗಿದೆ. ಆದರೆ, ಮೊದಲು ಕಡಲ್ಕೊರೆತ ಆಗದಂತೆ ತಡೆಗೋಡೆ ಮಾಡದಿದ್ದಲ್ಲಿ ಮತ್ತೆ ರಸ್ತೆ ಕಾಮಗಾರಿ ನಡೆಸಿದರೂ ಯಾವ ಪ್ರಯೋಜನ ಇಲ್ಲ. ಆದ್ದರಿಂದ ತಡೆಗೋಡೆ ಕಾಮಗಾರಿ ಆಗದೆ ರಸ್ತೆಕಾಮಗಾರಿ ಮಾಡಲಾಗುತ್ತಿಲ್ಲ. ಆದಷ್ಟು ಶೀಘ್ರದಲ್ಲಿ ತಡೆಗೋಡೆ ಕಾಮಗಾರಿ ಮಾಡಬೇಕು ಎಂದು ಅವರು ಸರ್ಕಾರವನ್ನ ಒತ್ತಾಯಿಸಿದರು.