ಪುತ್ತೂರು (ದಕ್ಷಿನ ಕನ್ನಡ):ಜಿಲ್ಲೆಯ ಅವಳಿ ವೀರರಾದ ಕೋಟಿ-ಚೆನ್ನಯರ ಹೆಸರನ್ನು ಪುತ್ತೂರಿನ ಬಸ್ ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕೆಲಸ ಮಾಡಲಾಗಿದೆ. ಸರ್ಕಾರವು ಅವಳಿ ವೀರರ ನಾಮಕರಣ ಮಾಡಿ ಅವರಿಗೆ ಗೌರವವನ್ನು ನೀಡುವ ಕಾರ್ಯ ಮಾಡಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದದ ಪುತ್ತೂರು ಬಸ್ ನಿಲ್ದಾಣಕ್ಕೆ 'ಕೋಟಿ-ಚೆನ್ನಯ' ಬಸ್ ನಿಲ್ದಾಣ ನಾಮಕರಣ ಸಮಾರಂಭದಲ್ಲಿ ನಾಮಫಲಕವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.
ಪುತ್ತೂರಲ್ಲಿ ಕಳೆದ 10 ವರ್ಷಗಳ ಹಿಂದೆ ನೂತನ ಬಸ್ ನಿಲ್ದಾಣವನ್ನು 33 ಕೋಟಿ ರೂ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಆಧ್ಯಾತ್ಮಿಕ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ ನಗರಸಭೆಯಿಂದ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನ ಪಡುಮಲೆಯಲ್ಲಿ ಹುಟ್ಟಿದ ಕೋಟೆ ಚೆನ್ನಯ ಅವಳಿ ವೀರರು ಆಗಿನ ಅವಿಭಜಿತ ಪುತ್ತೂರಿನ ಎಣ್ಮೂರಿನಲ್ಲಿ ಮರಣ ಹೊಂದಿದ್ದರು. ಅವರ ಸಾಧನೆಯನ್ನು ಅರಿಯಲು ಹಾಗೂ ಅವರನ್ನು ನೆನಪಿಸಿಕೊಳ್ಳಲು ಈ ಬಸ್ ನಿಲ್ದಾಣದ ನಾಮಕರಣವು ಪೂರಕವಾಗಿದೆ. ಕೋಟ ಚೆನ್ನಯರು ಒಂದು ಜಾತಿಗೆ ಸೀಮಿತವಾಗಿರದೆ, ಹಿಂದೂ ಧರ್ಮದ ಎಲ್ಲರೂ ಇವರ ಆರಾಧಕರಾಗಿದ್ದಾರೆ. ಇವರ ಆದರ್ಶಗಳು ಸಮಾಜಕ್ಕೆ ಮಾದರಿ ಆಗಿವೆ. ಸರ್ಕಾರವು ಕೋಟಿ ಚೆನ್ನಯರ ಆರಾಧಕರ ಜೊತೆಗಿದೆ ಎಂಬುದಕ್ಕೆ ಕೋಟಿ ಚನ್ನಯ ನಾಮಕರಣ ಪೂರಕವಾಗಿದೆ ಎಂದು ತಿಳಿಸಿದರು.