ಮಂಗಳೂರು ಕ್ಷೇತ್ರದಿಂದ ನಾಮಪತ್ರ ಹಿಂಪಡೆದ ಜೆಡಿಎಸ್ ಅಭ್ಯರ್ಥಿ ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿಗರು ಬೆದರಿಕೆ ಹಾಕಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ತಾಫ್ ಕುಂಪಲ ನಾಮಪತ್ರ ಸಲ್ಲಿಸಿದ್ದರು. ಆರಂಭದಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೇ ಇರಲು ನಿರ್ಧರಿಸಿತ್ತು. ಬಳಿಕ ಪಕ್ಷವು ಅಲ್ತಾಫ್ ಕುಂಪಲ ಅವರಿಗೆ ಟಿಕೆಟ್ ನೀಡಿದ್ದರಿಂದ ನಾಮಪತ್ರ ಸಲ್ಲಿಸಿದ್ದರು. ಇದೀಗ ಪಕ್ಷದ ಅನುಮತಿಗೂ ಮುನ್ನ ನಾಮಪತ್ರ ವಾಪಸ್ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ತಾಫ್ ಕುಂಪಲ, ನಾನು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ದಿನ ಕೆಲ ದುಷ್ಕರ್ಮಿಗಳು ನಮ್ಮ ಮನೆಗೆ ಬಂದು ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮೊಬೈಲ್ಗೆ ಬೆದರಿಕೆ ಕರೆಗಳು ಬರುತ್ತಿವೆ. ಜೊತೆಗೆ ವಾಟ್ಸಾಪ್ ನಂಬರಿಗೂ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಹೇಳಿದರು.
ನಾಮಪತ್ರ ಸಲ್ಲಿಸಿದ ಮರುದಿನ ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಡುವಾಗ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಾದ ಮುಸ್ತಾಫ ಮತ್ತು ಉಸ್ಮಾನ್ ಅವರು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಬಲವಂತವಾಗಿ ನಾಮಪತ್ರ ವಾಪಸು ಪಡೆಯುವ ಪತ್ರಕ್ಕೆ ಸಹಿ ಹಾಕಿಸಿದ್ದಾರೆ. ಬಳಿಕ ಈ ಪತ್ರವನ್ನು ಚುನಾವಣಾಧಿಕಾರಿಗೆ ಕೊಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಅವಕಾಶ ಸಿಕ್ಕಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಪಕ್ಷ ಉಪನಾಯಕ ಯು.ಟಿ ಖಾದರ್ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸತೀಶ್ ಕುಂಪಲ ಸ್ಫರ್ಧೆ ಮಾಡುತ್ತಿದ್ದು, ಎಸ್ ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ರಿಯಾಜ್ ಫರಂಗಿಪೇಟೆ ಸಹ ಕಣದಲ್ಲಿದ್ದಾರೆ.
ಇದನ್ನೂ ಓದಿ :ಜೋಶಿ ಸಮ್ಮುಖದಲ್ಲಿ ದೇಸಾಯಿ - ಕೊರವರ ಸಂಧಾನ ಯಶಸ್ವಿ : ಮತ್ತೆ ಒಂದಾದ ಗೆಳೆಯರು