ಕರ್ನಾಟಕ

karnataka

ETV Bharat / state

ಮಾರಣಾಂತಿಕ ಮೆದುಳು ಜ್ವರ ತಡೆಗೆ ಮಕ್ಕಳಿಗೆ ಜಪಾನೀಸ್ ಎನ್ಕೆಫಲಿಟಿಸ್ ಲಸಿಕೆ: ಹತ್ತು ಜಿಲ್ಲೆಗಳಲ್ಲಿ ಅಭಿಯಾನ..!

ಮೆದಳು ಜ್ವರ ಪ್ರಕರಣ ಕಡಿಮೆ ಇರುವ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ , ಉಡುಪಿ, ಯಾದಗಿರಿ, ಕಲ್ಬುರ್ಗಿ, ತುಮಕೂರು, ಹಾಸನ ,ರಾಮನಗರ, ಬಾಗಲಕೋಟ, ಗದಗ, ಹಾವೇರಿ ಯಲ್ಲಿ ಅಭಿಯಾನ ಸೋಮವಾರದಿಂದ ನಡೆಯಲಿದೆ.

Vaccine for brain fever
ಮೆದುಳು ಜ್ವರಕ್ಕೆ ಲಸಿಕೆ

By

Published : Dec 3, 2022, 5:31 PM IST

ಮಂಗಳೂರು: ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಮೆದುಳು ಜ್ವರ ಮರಣಾಂತಿಕ ಕಾಯಿಲೆ ತಡೆಗೆ ಜಪಾನೀಸ್ ಎನ್ಕೆಫಲಿಟಿಸ್ ಲಸಿಕೆ(ಜೆಇ) ಉತ್ತಮವಾಗಿದ್ದು, ರಾಮಬಾಣವಾಗಿದೆ. ಮೆದುಳು ಜ್ವರವು ವೈರಾಣು ಕ್ಯುಲೆಕ್ಸ್ ಜಾತಿಯ ಸೊಳ್ಳೆಯಿಂದ ಹರಡುತ್ತದೆ. ಬಾಧಿತ ಮಕ್ಕಳಲ್ಲಿ ಶೇಕಡಾ 20 ರಿಂದ 30 ಮಕ್ಕಳು ಮರಣ ಹೊಂದುವ ಸಂಭವವಿದೆ.

ಬದುಕಿ ಉಳಿದ ಮಕ್ಕಳಲ್ಲೂ ಶೇಕಡಾ 40 ರಿಂದ 50 ವ್ಯಕ್ತಿಗಳಲ್ಲಿ ನರ ದೌರ್ಬಲ್ಯ, ಬುದ್ದಿಮಾಂದ್ಯತೆ ಮತ್ತಿತರ ಪರಿಣಾಮಗಳು ಉಂಟಾಗುತ್ತವೆ. ಈ ಕಾಯಿಲೆ ಬಂದಾಗ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು , ಈ ಕಾಯಿಲೆ ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸುವ ಸಾಧ್ಯತೆಯೂ ಇದೆ.

ಪಶ್ಚಿಮ ಬಂಗಾಳದಲ್ಲಿ ಪತ್ತೆ:ಈ ಕಾಯಿಲೆ ಮೊದಲಿಗೆ ಭಾರತದ ಪಶ್ಚಿಮ ಬಂಗಾಳದಲ್ಲಿ 1973 ರಲ್ಲಿ ಪತ್ತೆಯಾಗಿತ್ತು‌. ಕರ್ನಾಟಕದಲ್ಲಿ 1978 ರಲ್ಲಿ ಕೋಲಾರದಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018,2019,2020 ರಲ್ಲಿ ಒಂದೊಂದು ಪ್ರಕರಣ ಪತ್ತೆಯಾಗಿದ್ದವು. ಜಪಾನ್ ನಲ್ಲಿ ಕಾಣಿಸಿಕೊಂಡ ಈ ಕಾಯಿಲೆಗೆ ಜಪಾನೀಸ್ ಎನ್ಕೆಫಲಿಟಿಸ್ ಎಂದು ಹೆಸರಿಡಲಾಗಿದೆ. ಜಗತ್ತಿನ 24 ದೇಶಗಳು ಮೆದಳುಜ್ವರ ಕಾಯಿಲೆಗೆ ಬಾಧಿತವಾಗಿವೆ.

2006 ರಲ್ಲೂ ಅಭಿಯಾನ:ಈ ಕಾಯಿಲೆ ತಡೆಗಾಗಿ 2006 ರಲ್ಲಿ ಭಾರತದಲ್ಲಿ ವ್ಯಾಕ್ಸಿನ್ ಅಭಿಯಾನ ಆರಂಭಿಸಿತ್ತು. ಈ ಅಭಿಯಾನದಲ್ಲಿ ಜಪಾನೀಸ್ ಎನ್ಕೆಫಲಿಟಿಸ್ ಲಸಿಕೆಯನ್ನೂ ಬಳಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕದ ವಿಜಯಪುರ ರಾಯಚೂರು, ಕೊಪ್ಪಳ, ಚಿತ್ರದುರ್ಗ, ಕೋಲಾರ, ಮಂಡ್ಯ, ಧಾರವಾಡ, ಚಿಕ್ಕಬಳ್ಳಾಪುರ, ದಾವಣಗೆರೆ ಬಳ್ಳಾರಿಯಲ್ಲಿ ಅಭಿಯಾನ ನಡೆದಿತ್ತು.

ಕಡಿಮೆ ಪ್ರಕರಣ 10 ಜಿಲ್ಲೆಯಲ್ಲಿ ಅಭಿಯಾನ:ಈ ಬಾರಿ ಮೆದಳು ಜ್ವರ ಬಾಧಿತ ಕಡಿಮೆ ಅಪಾಯದ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ , ಉಡುಪಿ, ಯಾದಗಿರಿ, ಕಲ್ಬುರ್ಗಿ, ತುಮಕೂರು, ಹಾಸನ ,ರಾಮನಗರ, ಬಾಗಲಕೋಟ, ಗದಗ, ಹಾವೇರಿ ಯಲ್ಲಿ ಅಭಿಯಾನ ಸೋಮವಾರದಿಂದ ನಡೆಯಲಿದೆ. ಈ‌ ಬಾರಿ ನಮ್ಮ ದೇಶದಲ್ಲಿ ತಯಾರಾದ ಬಯೊಟೆಕ್ ನಿಂದ ತಯಾರಿಸಿದ ಜೆನ್ ವ್ಯಾಕ್ ನಿಂದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.

ಪ್ರತಿ ಮಕ್ಕಳಿಗೆ 0.5 ಎಂ ಎಲ್ ಡೋಜ್ ನೀಡಲಾಗುತ್ತಿದೆ. ಈ ಲಸಿಕೆ ಬಾಟಲಿಯಲ್ಲಿ 2.5 ml ಔಷಧ ಇದ್ದು ಇದನ್ನು 5 ಮಕ್ಕಳಿಗೆ ನೀಡಲಾಗುತ್ತಿದೆ. 5 ವರ್ಷದೊಳಗಿನ ಮಕ್ಕಳಿಗೆ ತೊಡೆ ಭಾಗದಲ್ಲಿ ಮತ್ತು 5 ರಿಂದ 15 ವರ್ಷದ ಮಕ್ಕಳಿಗೆ ತೋಳಿಗೆ ಲಸಿಕೆಯನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಈ ಲಸಿಕೆ ಪಡೆದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪಾದನೆ ಆಗಿ ಮೆದುಳು ಜ್ವರದಿಂದ ದುಷ್ಪರಿಣಾಮ ಉಂಟಾಗುವುದಿಲ್ಲ. ಈ ಲಸಿಕೆ ಅಭಿಯಾನ ಬಳಿಕ ರೊಟಿನ್ ಇಮೂನೈಜೇಶನ್ ನಲ್ಲಿ 9 , 16 ತಿಂಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಲಾಗುತ್ತದೆ.

ಕ್ಯುಲೆಕ್ಸ್ ಸೊಳ್ಳೆ:ಕ್ಯುಲೆಕ್ಸ್ ಎಂಬ ಸೊಳ್ಳೆಯಿಂದ ಬರುವ ಮೆದಳು ಜ್ವರ ಮಕ್ಕಳಿಗೆ ಬಾಧಿಸುತ್ತಿದೆ. ಇದು ಮಾರಣಾಂತಿಕ ಕಾಯಿಲೆ ಆಗಿದೆ. ಈ ಲಸಿಕೆ ಮೊದಲ ಬಾರಿಗೆ ಕೊಡುತ್ತಿರುವುದರಿಂದ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ವರ್ಷ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿದ್ದು, ಕಾಯಿಲೆ ಅಪಾಯ ಬಗ್ಗೆ ಜಾಗೃತಿ ಅಗತ್ಯವಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್.

ಜಪಾನೀಸ್ ಎನ್ಕೆಫಲಿಟಿಸ್ ಮೊದಲ ಬಾರಿಗೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ‌ನೀಡುತ್ತಿರುವ ಹಿನ್ನೆಲೆ ಲಸಿಕೆ ಮಾಹಿತಿ ಕೊರತೆಯಿಂದ ಪಡೆಯಲು ಮಕ್ಕಳ ಪೋಷಕರು ಹಿಂಜರಿಯುತ್ತಿದ್ದಾರೆ. ಈ ಮಾಹಿತಿ ಆರೋಗ್ಯ ಇಲಾಖೆಗಿದೆ ಲಸಿಕೆ ಅಭಿಯಾನಕ್ಕೆ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


ಇದನ್ನೂಓದಿ:ಕ್ಯಾನ್ಸರ್ ಕಾಯಿಲೆಗೆ ಔಷಧಗಳು ಕೈಗೆಟಕುವಂತಿರಬೇಕು: ಹೈಕೋರ್ಟ್

ABOUT THE AUTHOR

...view details