ಮಂಗಳೂರು:ನಿನ್ನೆ ರಾತ್ರಿ ಸುರಿದ ಮಳೆಗೆ ನಗರದ ಕೊಟ್ಟಾರ ಬಳಿಯ ಇನ್ಫೋಸಿಸ್ ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಹೋರ್ಡಿಂಗ್ವೊಂದು ಹೈಟೆನ್ಷನ್ ವೈರ್ ಮೇಲೆ ಬಿದ್ದಿದ್ದು, ವಿದ್ಯುತ್ ಕಂಬ ರಸ್ತೆ ಕಡೆಗೆ ವಾಲಿ ನಿಂತಿದೆ.
ಮಂಗಳೂರು ನಗರಾದ್ಯಂತ ರಾತ್ರಿ ವೇಳೆಗೆ ಸಾಧಾರಣ ಮಳೆ ಸುರಿದಿತ್ತು. ಪರಿಣಾಮ ಹಳೆಯದಾಗಿ ತುಕ್ಕು ಹಿಡಿದಿದ್ದ ಈ ಬೃಹತ್ ಹೋರ್ಡಿಂಗ್ ಏಕಾಏಕಿ ಬಾಗಿ ಕುಸಿದು ಹೈಟೆನ್ಷನ್ ವೈರ್ ಮೇಲೆಯೇ ಬಿದ್ದಿದೆ. ಈ ವೇಳೆ ವಿದ್ಯುತ್ ಕಂಬ ವಾಲಿಕೊಂಡಿದ್ದರೂ, ಹೋರ್ಡಿಂಗ್ ಅನ್ನು ತಡೆದು ನಿಲ್ಲಿಸಿದೆ. ಒಂದು ವೇಳೆ ಇಲ್ಲಿ ಈ ವಿದ್ಯುತ್ ಕಂಬ ಇಲ್ಲದಿದ್ದಲ್ಲಿ ಹೋರ್ಡಿಂಗ್ ನೇರ ರಸ್ತೆಗೆ ಬೀಳುತ್ತಿದ್ದು ರಸ್ತೆಯಲ್ಲಿ ಯಾರಾದರೂ ಸಂಚರಿಸುತ್ತಿದ್ದಲ್ಲಿ ಭಾರಿ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಇಂತಹ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಇದೀಗ ಹೋರ್ಡಿಂಗ್ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹೈಟೆನ್ಷನ್ ವೈರ್ ಮೇಲೆ ಬಿದ್ದ ಬೃಹತ್ ಹೋರ್ಡಿಂಗ್ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಅಪಾಯಕಾರಿ ಫ್ಲೆಕ್ಸ್, ಹೋರ್ಡಿಂಗ್ಗಳನ್ನು ತೆರವು ಮಾಡಬೇಕೆಂದು ಮನಪಾ ಆಯುಕ್ತರು ಹಾಗೂ ಜಿಲ್ಲಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಈ ಹಿಂದೆಯೇ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಆದರೂ ಈ ಆದೇಶ ಸರಿಯಾಗಿ ಪಾಲನೆಯಾಗದೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಅಡಿಕೆ ಸಾಗಿಸುತ್ತಿದ್ದ ಲಾರಿಯಿಂದ 10 ಲಕ್ಷ ರೂ ಕಳವು: ಅಡಿಕೆ ಸಾಗಿಸುತ್ತಿದ್ದ ಲಾರಿಯಿಂದ 10 ಲಕ್ಷ ರೂ.ನಗದು ಕಳವಾಗಿರುವ ಮತ್ತು ಲಾರಿಯ ನಿರ್ವಾಹಕ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಅಝರ್ ಟ್ರೇಡಿಂಗ್ ಮತ್ತು ಪುತ್ತೂರಿನಲ್ಲಿರುವ ಅಝ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲೀಕ ಪುತ್ತೂರು ನಗರದ ಹೊರವಲಯದ ಬನ್ನೂರು ಅಝರ್ ಕಂಪೌಂಡ್ ನಿವಾಸಿ ಕಲಂದರ್ ಇಬ್ರಾಹಿಂ ನೌಷದ್ ಹಣ ಕಳೆದುಕೊಂಡವರು.
ಕಲಂದರ್ ಇಬ್ರಾಹಿಂ ನೌಷದ್ ಅವರು ಲಾರಿ ಮೂಲಕ ಪುತ್ತೂರಿನಿಂದ ಪುಣೆಗೆ ಅಡಿಕೆ ಸಾಗಿಸುತ್ತಿದ್ದರು. ಲಾರಿ ಜು.18ರಂದು ಅಲ್ಲಿಂದ ವಾಪಸಾಗುವಾಗ ಪುಣೆಯ ಅಝ ಟ್ರೇಡಿಂಗ್ ಸಂಸ್ಥೆಯ ಸಿಬ್ಬಂದಿ ಸಪ್ರಝ್ ಅವರು ಲಾರಿ ಚಾಲಕ ಪುತ್ತೂರಿನ ಕಬಕದ ಅಬ್ದುಲ್ ರವೂಫ್ ಮತ್ತು ನಿರ್ವಾಹಕ ಶಿವಕುಮಾರ್ ಯಾನೆ ಶಿವು ಅವರಲ್ಲಿ ಕಲಂದರ್ ಇಬ್ರಾಹಿಂ ನೌಷದ್ ಅವರಿಗೆ ನೀಡಲೆಂದು 10 ಲಕ್ಷ ನಗದು ನೀಡಿದ್ದರು.
ಲಾರಿಯನ್ನು ಚಾಲಕ ಅಬ್ದುಲ್ ರವೂಫ್ ಅವರು ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಿಲ್ಲಿಸಿ ಮಾರುಕಟ್ಟೆಗೆ ಹೋಗಿ ಬರುವಾಗ ಶಿವಕುಮಾರ್ ನಾಪತ್ತೆಯಾಗಿದ್ದರು. ಲಾರಿಯಲ್ಲಿಟ್ಟಿದ್ದ ಹಣದ ಕಟ್ಟು ಕೂಡ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಲಾರಿ ಚಾಲಕ ಅಬ್ದುಲ್ ರವೂಫ್ ನೀಡಿದ ಮಾಹಿತಿಯಂತೆ ಸಂಸ್ಥೆಯ ಮಾಲೀಕ ಕಲಂದರ್ ಇಬ್ರಾಹಿಂ ನೌಷದ್ ಅವರು ಕಂಡಕ್ಟರ್ ಶಿವಕುಮಾರ್ ಯಾನೆ ಶಿವು ಹಣವನ್ನು ಲಾರಿಯಿಂದ ಕಳವು ಮಾಡಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜವಳಿ ಅಂಗಡಿಯಲ್ಲಿ ಕಳ್ಳತನ: ಮುಗಳೂರು ನಗರದ ಜವಳಿ ಅಂಗಡಿಯ ಬೀಗ ಒಡೆದು ಕಳ್ಳರು ಹಣ ಕಳವು ಮಾಡಿದ್ದಾರೆ. ನಗರದ ಭವಂತಿ ರಸ್ತೆಯ ದೂಜ ಪೂಜಾರಿ ಕೋ ಮಳಿಗೆಯಿಂದ 20 ಸಾವಿರ ರೂ ಕಳವಾಗಿರುವುದು ಶುಕ್ರವಾರ ಬೆಳಗ್ಗೆ ಗೊತ್ತಾಗಿದೆ. ಮಳಿಗೆ ಮಾಲೀಕ ಅಕ್ಷಯ ಕುಮಾರ್ ಪಿ.ಕೆ ಅವರು ಗುರುವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಬಂದ್ ಮಾಡಿ ಹೋಗಿದ್ದರು.
ಶುಕ್ರವಾರ 8 ಗಂಟೆಗೆ ಪರಿಚಯದವರು ಫೋನ್ ಮಾಡಿ ಅಂಗಡಿ ಬೀಗ ಒಡೆದಿರುವ ಮಾಹಿತಿ ನೀಡಿದ್ದರು. ಕೂಡಲೇ ಅಂಗಡಿಗೆ ಬಂದಾಗ ಶಟರ್ ಬಾಗಿಲಿನ ಬೀಗ ಒಡೆದು ಎದುರಿನ ಗ್ಲಾಸ್ ತುಂಡರಿಸಿ ಒಳ ಪ್ರವೇಶಿಸಿ ಡ್ರಾವರ್‌ನಲ್ಲಿದ್ದ ಸುಮಾರು 20 ಸಾವಿರ ರೂ. ಕಳವು ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಗಂಭೀರ:ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಕೂಲಿ ಕಾರ್ಮಿಕನೊಬ್ಬ ಶುಕ್ರವಾರ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಹಾರ ಮೂಲದ ಶಾಹಿದ್ (25) ಕಟ್ಟಡದಿಂದ ಬಿದ್ದು ಗಾಯಗೊಂಡ ಕಾರ್ಮಿಕ. ಅಬ್ಬಕ್ಕ ಸರ್ಕಲ್‌ನಲ್ಲಿ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ರಕ್ಷಣಾತ್ಮಕ ಪರಿಕರಗಳನ್ನ ಬಳಸದೇ ದುಡಿಮೆಯಲ್ಲಿ ತೊಡಗಿದ್ದ ಕಾರ್ಮಿಕ ಶಾಹಿದ್ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಾಳುವನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭ ಆಸ್ಪತ್ರೆಗೆ ಚಿತ್ರೀಕರಣಕ್ಕೆ ತೆರಳಿದ್ದ ಪತ್ರಕರ್ತ ದಿನೇಶ್ ನಾಯಕ್ ಎಂಬವರಿಗೆ ಕಟ್ಟಡದ ಮಾಲೀಕನ ಆಪ್ತರೊಬ್ಬರು ಬೆದರಿಕೆ ಹಾಕಿ ಚಿತ್ರೀಕರಣ ಮಾಡದಂತೆ ತಡೆದಿದ್ದಾರೆ. ಚಿತ್ರಗಳನ್ನು ಡಿಲೀಟ್ ಮಾಡುವಂತೆ ಮೊಬೈಲ್ ಕಸಿಯಲು ಮುಂದಾದ ಘಟನೆಯೂ ನಡೆದಿದೆ.
ಇದನ್ನೂ ಓದಿ:ಗುಜರಾತ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಂಗಳೂರಿನ ಯಾತ್ರಿಕರು ಸೇಫ್..