ಕರ್ನಾಟಕ

karnataka

ETV Bharat / state

ಬಂಟ್ವಾಳ: ಬೆಳಗ್ಗೆ ಮನೆಗೆ ನುಗ್ಗಿದ ಆಗಂತುಕರು; ತಾಯಿ ಮಗಳಿಗೆ ಚಾಕು ತೋರಿಸಿ ದರೋಡೆ

ಗುರುವಾರ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ್ದ ನಾಲ್ವರು ಮುಸುಕುಧಾರಿಗಳು ತಾಯಿ ಮಗಳಿಗೆ ಚಾಕು ತೋರಿಸಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

house-robbery
ಮನೆ ದರೋಡೆ

By ETV Bharat Karnataka Team

Published : Jan 11, 2024, 4:26 PM IST

Updated : Jan 11, 2024, 7:42 PM IST

ಬಂಟ್ವಾಳ:ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್​ ಮುಂಭಾಗದಲ್ಲಿ ಇರುವ ಮನೆಯೊಂದಕ್ಕೆ ಇಂದು ಬೆಳಗ್ಗೆ ನಾಲ್ವರು ಮುಸುಕುಧಾರಿಗಳು ನುಗ್ಗಿ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿದ್ದಾರೆ. ಈ ವೇಳೆ ತಾಯಿ- ಮಗಳ ಬಳಿಯಿದ್ದ ಬಂಗಾರ, ನಗದು ಸಹಿತ ಸುಮಾರು 3 ಲಕ್ಷ ರೂ. ಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ.

ಹೆದ್ದಾರಿ ಬಳಿ ಇರುವ ಮನೆಯಲ್ಲಿ ಈ ರೀತಿಯಾಗಿ ದರೋಡೆ ಮಾಡುವ ಕೃತ್ಯ ಪರಿಸರದಲ್ಲಿ ಹೊಸದಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಬಂಟ್ವಾಳ ಪರಿಸರದಲ್ಲಿ ಕಳವು ಕೃತ್ಯಗಳು ಈಗಾಗಲೇ ಜಾಸ್ತಿಯಾಗುತ್ತಿದ್ದು, ಪಿಕ್ ಪಾಕೆಟ್​ನಂಥ ಕೃತ್ಯಗಳೂ ನಡೆಯುತ್ತಿವೆ. ಇದೀಗ ಮನೆಗೇ ನುಗ್ಗಿ ಬೆದರಿಸಿ, ದರೋಡೆ ಮಾಡುವ ಕೃತ್ಯ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಫ್ಲೋರಿನ್​ ಪಿಂಟೋ ಮತ್ತು ಅವರ ಮಗಳು ಮರಿನಾ ಪಿಂಟೋ ಮಾತ್ರ ಈ ಮನೆಯಲ್ಲಿದ್ದರು. ಹೊಸದಾಗಿ ಕಟ್ಟಿಸಿದ ಮನೆ ಇದಾಗಿದ್ದು, ಇಲ್ಲಿಗೆ ಬೆಳಗ್ಗೆ ಸುಮಾರು 6.30ರ ವೇಳೆಗೆ ನಾಲ್ವರು ಮುಸುಕುಧಾರಿಗಳು ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಇದರ ಅರಿವಿಲ್ಲದ ಮನೆಯವರು ಬಾಗಿಲು ತೆರೆದಾಗ ಕೃತ್ಯ ನಡೆದಿದೆ. ಬೀರುವಿನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 30 ಸಾವಿರ ನಗದು ಹಾಗೂ ಒಂದು ಮೊಬೈಲ್ ಫೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗದನ್ನು ಕಳ್ಳರು ದರೋಡೆ ಮಾಡಿದ್ದಾರೆ.

ಕರೆಗಂಟೆ ಸದ್ದು ಕೇಳಿ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುಧಾರಿಗಳು ಇದ್ದು, ಅವರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ಈ ಸಂದರ್ಭ ಮನೆಯವರು ಬೀರುವಿನ ಬೀಗದ ಕೀ ನೀಡಿದ್ದಾರೆ. ಚಿನ್ನವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯಿಂದ ಜ್ಯೂಸ್ ಮಷಿನ್ ಒಂದನ್ನು ಕಳವು ಮಾಡಲಾಗಿತ್ತು.

ಸದ್ಯ ಇಂದಿನ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೊಲೀಸ್ ಇನ್ಸ್​ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಹಾಗೂ ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಪ್ರತ್ಯೇಕ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಚಿನ್ನಾಭರಣ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ ಬಳಿಯ ಜಿಎಚ್ಎಸ್ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್​ಗೆ ಗ್ರಾಹಕರ ಸೋಗಿನಲ್ಲಿ ಮೂವರು ಬಂದಿದ್ದರು. ಬಳಿಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಆರೋಪಿಗಳನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಮಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳು ಅಂದರ್​

Last Updated : Jan 11, 2024, 7:42 PM IST

ABOUT THE AUTHOR

...view details