ಕರ್ನಾಟಕ

karnataka

ETV Bharat / state

ಹಿಂಬದಿ ಸವಾರರಿಗೂ ಹೆಲ್ಮೆಟ್​ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ

ಪುತ್ತೂರಿನಲ್ಲಿ ಹೆಲ್ಮೆಟ್ ಧರಿಸದ ಹಿಂಬದಿ ಸವಾರನಿಗೆ ದಂಡ ವಿಧಿಸುವ ಪ್ರಕ್ರಿಯೆ ಇಂದಿನಿಂದ ಮತ್ತೆ ಆರಂಭಗೊಂಡಿದ್ದು, ದಿಢೀರ್​ ನಿರ್ಧಾರಕ್ಕೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Oct 16, 2020, 3:51 PM IST

ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ
ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ

ಪುತ್ತೂರು:ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದ ಹಿಂಬದಿ ಸವಾರರಿಗೂ ದಂಡ ವಿಧಿಸುವ ಪ್ರಕ್ರಿಯೆ ಇಂದಿನಿಂದ ಮತ್ತೆ ಆರಂಭವಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿರುವ ಸಹ ಸವಾರರಿಗೆ ಇಂದಿನಿಂದ ರೂ. 500ರಂತೆ ದಂಡ ವಿಧಿಸುತ್ತಿರುವ ವಿದ್ಯಮಾನ ಪುತ್ತೂರಿನ ಮುಕ್ರಂಪಾಡಿ ಸೇರಿದಂತೆ ಹಲವು ಭಾಗದಲ್ಲಿ ಕಂಡು ಬಂದಿದೆ.

ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ಪುತ್ತೂರಿನಲ್ಲಿಯೂ ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಸಂಚಾರಿ ಠಾಣಾ ಎಸ್.ಐ ರಾಮ ನಾಯ್ಕ ತಿಳಿಸಿದ್ದಾರೆ. ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸದ್ಯ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಈ ಹಿಂದೆ ಆದೇಶ ಹೊರಡಿಸಿತ್ತು. ನಿಯಮ ಉಲ್ಲಂಘಿಸುವವರಿಗೆ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಕರ್ನಾಟಕ ಸರ್ಕಾರ ರೂ. 500ಕ್ಕೆ ಇಳಿಸಿದೆ. ಆರಂಭದ ದಿನಗಳಲ್ಲಿ ಸಂಚಾರಿ ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರಾದರೂ ಬಳಿಕದ ದಿನಗಳಲ್ಲಿ ಈ ನಿಯಮದಲ್ಲಿ ಸಡಿಲಿಕೆ ಕಂಡು ಬಂದಿತ್ತು.

ಏಕಾಏಕಿ ದಂಡ ವಸೂಲು ಆರೋಪ:ಆದರೆ ಇಂದು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ, ಸಂಚಾರಿ ಪೊಲೀಸರು ದಂಡ ವಸೂಲಿಗೆ ಇಳಿದಿದ್ದಾರೆ. ಕೊರೊನಾ ಕಾಲದಲ್ಲಿ ಈಗಾಗಲೇ ಜನರು ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇದರ ನಡುವೆ ಇದು ಹೆಚ್ಚಿನ ಹೊರೆಯಾಗುತ್ತಿದೆ. ದಂಡ ವಸೂಲಿಗೆ ಇಳಿಯುವ ಮೊದಲು ನಿಯಮಗಳನ್ನು ಕಡ್ಡಾಯಗೊಳಿಸುತ್ತಿರುವ ಬಗ್ಗೆ ಜನರಿಗೆ ಪ್ರಚಾರದ ಮೂಲಕ ಮಾಹಿತಿ ನೀಡಬೇಕಿತ್ತು. ಪೊಲೀಸರು ಕೈಗೊಂಡಿರುವ ಈ ನಿರ್ಧಾರ ಬೈಕ್​ ಸವಾರರಿಗೆ ನಷ್ಟವನ್ನುಂಟು ಮಾಡುತ್ತಿದೆ ಎಂದು ಹಲವು ದ್ವಿಚಕ್ರ ಸವಾರರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬಗ್ಗೆ ಯಾವುದೇ ತಕರಾರು ಇಲ್ಲ. ಹಿಂಬದಿ ಸವಾರನ ಸುರಕ್ಷತೆಯ ದೃಷ್ಟಿಯಿಂದ ಇದು ಉಪಯುಕ್ತ ಕ್ರಮ. ಆದರೆ ದಂಡ ವಸೂಲಿಯಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಮೊದಲು ಜನರಲ್ಲಿ ಜಾಗೃತಿ ಮೂಡಿಸುವ ಮಾಧ್ಯಮ ಪ್ರಚಾರದಂತಹ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಬೈಕ್ ಸವಾರರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ABOUT THE AUTHOR

...view details