ಮಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ಕೂಡ ತನ್ನ ಅಬ್ಬರ ಮುಂದುವರೆಸಿದೆ.
ಭಾರೀ ಮಳೆ ಪರಿಣಾಮ ಜಿಲ್ಲೆಯ ನದಿಗಳು ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ. ವಿವಿಧೆಡೆ ತೋಟ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇತಿಹಾಸ ಪ್ರಸಿದ್ಧ ಮುಲ್ಕಿ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲ ಜಲಾವೃತವಾಗಿದೆ. ನಗರದ ಹೊರವಲಯದಲ್ಲಿರುವ ಬಜ್ಪೆ ಸಮೀಪದ ಅದ್ಯಪಾಡಿ ಕೆಂಜಾರು ಬಳಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಬಂದ್ ಆಗಿದೆ.
ಮಂಗಳೂರಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ ನಗರದ ಹೊರವಲಯದ ನೀರು ಮಾರ್ಗದ ಬಳಿಯ ರೆಡ್ ಕ್ಯಾಮಲ್ ಸ್ಕೂಲ್ ಸಮೀಪದ ಕೆಲರಾಯ್ ರಸ್ತೆ ಸಂಪೂರ್ಣ ಕುಸಿದಿದೆ. ಅಳಪೆ ಬಳಿಯ ಸರಿಪಳ್ಳ ಎಂಬಲ್ಲಿ ಮನೆಯೊಂದು ಕುಸಿದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಸೆ. 21(ನಾಳೆ) ಮತ್ತು 22(ನಾಡಿದ್ದು) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ದಿನಗಳಲ್ಲಿ ಮಳೆ ಮತ್ತಷ್ಟು ಆರ್ಭಟಿಸುವ ಸಾಧ್ಯತೆಯಿದೆ.