ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಕಳೆದೆರಡು ದಿನಗಳಿಂದಜಿಲ್ಲಾದ್ಯಂತ ಮತ್ತು ಘಟ್ಟ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದೆ.
ಸ್ನಾನಘಟ್ಟ ಮಾತ್ರವಲ್ಲದೇ, ಸ್ನಾನಘಟ್ಟದ ಬಳಿಯಿರುವ ದೇವರಕಟ್ಟೆಯೂ ಭಾಗಶಃ ಮುಳುಗಡೆಯಾಗಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದೆ. ಭಕ್ತಾಧಿಗಳು ಪ್ರವಾಹದ ನೀರಿನಲ್ಲೇ ತೀರ್ಥಸ್ನಾನ ನೆರವೇರಿಸುತ್ತಿದ್ದಾರೆ. ದೇವಸ್ಥಾನದ ವತಿಯಿಂದ ಹಗ್ಗದ ಸಹಾಯದ ಮೂಲಕ ತೀರ್ಥಸ್ನಾನ ನೆರವೇರಿಸಲು ಅನುವು ಮಾಡಿಕೊಡಲಾಗಿದೆ ಮತ್ತು ರಕ್ಷಣೆಗೆ ಗಾರ್ಡ್ಗಳನ್ನು ನಿಯೋಜಿಸಲಾಗಿದೆ.