ಪುತ್ತೂರು: ಕರಾವಳಿಯಾದ್ಯಂತ ಇಂದು ಕೂಡಾ ವರುಣನ ಆರ್ಭಟ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತಿದ್ದು, ಮಳೆ ನೀರಿನಿಂದ ತಗ್ಗು ಪ್ರದೇಶಗಳು ಮುಳಗಡೆಯಾಗುವ ಆತಂಕ ಎದುರಾಗಿದೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕೊಂಚ ಮಟ್ಟಿಗೆ ಮಳೆ ತಗ್ಗಿರುವುದರಿಂದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ ಅಪಾಯದ ಮಟ್ಟಕ್ಕೆ ತಲುಪಿಲ್ಲ. ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಹಲವೆಡೆ ಭಾರೀ ಮಳೆ ಮುಂದುವರೆದಿದೆ. ಒಂದೆಡೆ ಕೊರೊನಾ ಲಾಕ್ಡೌನ್, ಇನ್ನೊಂದೆಡೆ ಮಳೆಯ ಕಾರಣ ಜನ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ಪುತ್ತೂರು ಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಜನರಿಲ್ಲದೆ ಬಿಕೋ ಎನ್ನುತ್ತಿವೆ.
ಪುತ್ತೂರು-ಪಾಣಾಜೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಚೇಳ್ಯಡ್ಕ ಎಂಬಲ್ಲಿ ಸೇತುವೆಯೊಂದು ಮುಳುಗಡೆಗೊಂಡಿದೆ. ಇದರಿಂದಾಗಿ ಬೆಟ್ಟಂಪಾಡಿ, ಚೇಳ್ಯಡ್ಕ ಹಾಗೂ ಇರ್ದೆ ಮೊದಲಾದ ಭಾಗಗಳ ಸಾರ್ವಜನಿಕರಿಗೆ ಸಂಪರ್ಕಕ್ಕೆ ಸಮಸ್ಯೆಯಾಗಿದೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ ವಾಹನ ಸಂಚಾರ ವಿರಳವಾಗಿದೆ. ಹೀಗಾಗಿ ಸೇತುವೆ ಮುಳುಗಡೆಯಾದರೂ ಹೆಚ್ಚಿನ ಸಮಸ್ಯೆಯಾಗಿಲ್ಲ. ಮಳೆಗೆ ಜಿಲ್ಲೆಯ ಹಲವೆಡೆ ಮರಗಳು ಉರುಳಿದ್ದು, ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಳೆ ಇದೇ ರೀತಿ ಮುಂದುವರೆದರೆ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆಯೂ ಇದೆ. ಜಿಲ್ಲೆಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.