ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯವರೆಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇಂದು ಕೊಂಚ ತಗ್ಗಿದೆ. ಆದರೆ ಬಹುತೇಕ ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಕಡಿಮೆ ಆಗಿಲ್ಲ. ಇಂದು ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಡಬ, ಪಾಣೆಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 50ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 19ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದರೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ತೀವ್ರ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಗಾಳಿ, ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದರೆ, ಗ್ರಾಮಾಂತರದಲ್ಲಿ ತೋಟಗಾರಿಕಾ ಬೆಳೆ, ಕೃಷಿಗೆ ತೀವ್ರ ಹಾನಿ ಉಂಟಾಗಿದೆ. ನದಿ ಪಾತ್ರದ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. 10ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್ ಕೆಟ್ಟುಹೋಗಿ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಮರಗಳು ಉರುಳಿ ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದು, ತೆರವುಗೊಳಿಸಲಾಗಿದೆ.
ನೇತ್ರಾವತಿ ನದಿ 7.9 ಮೀ. (ಅಪಾಯದ ಮಟ್ಟ 8.5ಮೀ.) ಎತ್ತರಕ್ಕೆ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಾಣೆಮಂಗಳೂರು, ಆಲಡ್ಕ, ಬಡ್ಡಕಟ್ಟೆ, ಜಕ್ರಿಬೆಟ್ಟು ಕಂಚಿಕಾರಪೇಟೆ ಪ್ರದೇಶದ 20ಕ್ಕೂ ಅಧಿಕ ಕುಟುಂಬವನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದ್ದರೂ ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕಡಬದಲ್ಲಿ 10 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.