ಉಳ್ಳಾಲ (ಮಂಗಳೂರು): ಬೃಹತ್ ಗಾತ್ರದ ಹೆಬ್ಬಾವೊಂದು ಪ್ರಾಣಿಯೊಂದನ್ನು ನುಂಗಿರುವ ಸ್ಥಿತಿಯಲ್ಲಿ ಕೊಣಾಜೆಯ ತಿಬ್ಲಪದವು ಎಂಬಲ್ಲಿ ಮಂಗಳವಾರ ಸಂಜೆ ವೇಳೆ ಪತ್ತೆಯಾಗಿದೆ.
ಹೊಟ್ಟೆಯೊಳಗಿನ ಆಹಾರ ಜೀರ್ಣವಾಗದೆ ಹೆಬ್ಬಾವನ್ನು ಸ್ಥಳಾಂತರಿಸುವಂತಿಲ್ಲ ಅನ್ನುವ ಉರಗತಜ್ಞರ ಅಭಿಪ್ರಾಯದಂತೆ ಸ್ಥಳದಲ್ಲೇ ಹೆಬ್ಬಾವನ್ನು ಉಳಿಸಲಾಗಿದೆ.
ತಿಬ್ಲಪದವು ನಿವಾಸಿ ಭಾಸ್ಕರ್ ಎಂಬವರ ಮನೆ ಹಿಂಬದಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಹಾವಿನ ಹೊಟ್ಟೆ ದಪ್ಪನೆ ಇದ್ದು, ಇಡೀ ಪ್ರಾಣಿಯನ್ನು ನುಂಗಿರುವ ಸಾಧ್ಯತೆ ಇದೆ. ಸ್ಥಳೀಯರ ಪ್ರಕಾರ ಹಂದಿ ಅಥವಾ ಆಡನ್ನು ತಿಂದಿರುವ ಸಾಧ್ಯತೆ ವ್ಯಕ್ತಪಡಿಸಿದ್ದಾರೆ.
ಕೊಣಾಜೆ ಬಳಿ ಪತ್ತೆಯಾದ ಬೃಹತ್ ಹೆಬ್ಬಾವು ಸ್ಥಳಕ್ಕೆ ಆಗಮಿಸಿರುವ ಉರಗತಜ್ಞ ಪಜೀರು ನಿವಾಸಿ ದಿಲೀಪ್ ಅವರು ತಕ್ಷಣಕ್ಕೆ ಹೆಬ್ಬಾವು ಸ್ಥಳಾಂತರಗೊಳಿಸಲು ಅಸಾಧ್ಯ ಎಂದಿದ್ದಾರೆ. ಹೆಬ್ಬಾವು ಹೆಣ್ಣಾಗಿದ್ದು, 30 ಕೆಜಿ ಯಷ್ಟು ತೂಕವನ್ನು ಹೊಂದಿದೆ. ಹೆಬ್ಬಾವಿಗೆ 13 ವರ್ಷಗಳಾಗಿರುವ ಸಾಧ್ಯತೆ ಇದೆ. ಹೊಟ್ಟೆಯಲ್ಲಿ ಘನಾಹಾರ ಇರುವುದರಿಂದ ಶರೀರ ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ. ಹಿಡಿಯಲು ಪ್ರಯತ್ನಿಸಿದಲ್ಲಿ ಆಹಾರ ಹೊರಹಾಕಿ ಹಾವಿನ ಸಾವು ಸಂಭವಿಸುವ ಸಾಧ್ಯತೆಗಳೂ ಇವೆ.
8 ಗಂಟೆಗಳ ಬಳಿಕ ಜೀರ್ಣ ನಡೆಸುವ ಕಾರ್ಯ ಸಾಮಾನ್ಯವಾಗಿ ಹೆಬ್ಬಾವಿನಲ್ಲಿ ಆಗುತ್ತದೆ. ಮೂರು ದಿನಗಳ ಕಾಲ ನಿಗಾ ವಹಿಸಿ, ನಂತರ ಘನಾಹಾರ ಜೀರ್ಣಗೊಂಡ ಬಳಿಕವಷ್ಟೇ ಸ್ಥಳಾಂತರಕ್ಕೆ ಪ್ರಯತ್ನಿಸುವುದಾಗಿ ದಿಲೀಪ್ ತಿಳಿಸಿದ್ದಾರೆ.
ಇದನ್ನೂ ಓದಿ:'ಐಡಿ ಕಾರ್ಡ್' ತೋರಿಸಿ ರಸ್ತೆಗಿಳಿಯುತ್ತಿರುವ ಜನ.. ಸರ್ಕಾರದ ನಿರ್ಧಾರಕ್ಕೆ ಪೊಲೀಸರಿಂದಲೇ ಅಸಮಾಧಾನ?