ಮಂಗಳೂರು:ಮೂಡಬಿದ್ರೆ ತಾಲೂಕಿನ ಮೂಡುಕೋಣಾಜೆಯಲ್ಲಿ ಸಿಡಿಲು ಬಡಿದು ಮೂರು ನವಿಲುಗಳು ಸಾವನ್ನಪ್ಪಿದ ಹಿನ್ನೆಲೆ ನವಿಲುಗಳ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನಡೆಸಲಾಯಿತು.
ಮೂಡಬಿದ್ರೆಯ ಏರೋಡಿಬೆಟ್ಟ ಎಣ್ಮಜೆಯಲ್ಲಿ ನಿನ್ನೆ ಮಾವಿನ ಮರಕ್ಕೆ ಸಿಡಿಲು ಬಡಿದಿತ್ತು. ಮಾವಿನ ಮರದಲ್ಲಿ ಕೂತಿದ್ದ ಮೂರು ನವಿಲುಗಳು ಸಿಡಿಲು ಬಡಿದು ಸಾವನ್ನಪ್ಪಿದ್ದವು.
ಸರಕಾರಿ ಗೌರವದೊಂದಿಗೆ ನವಿಲುಗಳ ಅಂತ್ಯಕ್ರಿಯೆ ಎಣ್ಮಜೆಯ ಸೀತು ಎಂಬವರ ಮನೆಯ ಸಮೀಪದಲ್ಲಿ ನವಿಲುಗಳು ಸಿಡಿಲು ಬಡಿದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕಾಗಮಿಸಿದ ಮೂಡಬಿದ್ರೆ ವಲಯ ಅರಣ್ಯ ಅಧಿಕಾರಿಗಳು ಸಾವನ್ನಪ್ಪಿದ ನವಿಲುಗಳ ಮಹಜರು ನಡೆಸಿ ಅದರ ಮರಣೋತ್ತರ ಪರೀಕ್ಷೆ ನಡೆಸಿ ಸರಕಾರದ ಮಾನದಂಡದ ಪ್ರಕಾರ ಅಂತ್ಯಕ್ರಿಯೆ ನಡೆಸಿದರು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ರಾಷ್ಟ್ರಪಕ್ಷಿಯಾಗಿರುವ ನವಿಲು ಮೃತಪಟ್ಟಾಗ ಸರಕಾರದ ಮಾನದಂಡದಂತೆ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಮೃತ ನವಿಲುಗಳ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದ್ದು ಬಳಿಕ ಈ ಘಟನೆಯನ್ನು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.