ಸುಳ್ಯ (ದಕ್ಷಿಣ ಕನ್ನಡ): ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವಾರು ಜನರಿಂದ ಲಕ್ಷಗಟ್ಟಲೇ ಹಣ ವಸೂಲಿ ಮಾಡಿ ವಂಚಿಸಿದ ಆರೋಪಿಯೊಬ್ಬರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಇವರು ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಹಲವರನ್ನು ವಂಚಿಸಿದ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 40ಕ್ಕೂ ಹೆಚ್ಚು ಮಂದಿ ಮಡಿಕೇರಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಹಣ ಪಡೆದು ವಂಚನೆ:ಕೇರಳದ ಕಾಸರಗೋಡಿನ ಮುಟ್ಟತೋಡಿ ನಿವಾಸಿ ಶ್ರೀನಾಥ್ ಎಂಬುವರು ಬಂಧಿತ ಆರೋಪಿ. ಶ್ರೀನಾಥ್ ಮತ್ತು ವಿನೋದ್ ಎಂಬುವರು ಚೆಕ್ ರಿಪಬ್ಲಿಕ್ ಮತ್ತು ವಿದೇಶಗಳಲ್ಲಿ ಉದ್ಯೋಗ, ಕೊಡಿಸುವುದಾಗಿ ಜನರಿಗೆ ಹೇಳಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ ಮಾಡಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ಕೊಡಗು ಜಿಲ್ಲೆಯ ಚೆಂಬೂ ನಿವಾಸಿ ಜೇಮ್ಸ್ ಜೋಸೆಫ್ ಎಂಬುವರು ನೀಡಿದ ದೂರು ಆಧರಿಸಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿದೇಶದಲ್ಲಿ ಉದ್ಯೋಗ ಪಡೆಯಲು ಸುಮಾರು 4ಲಕ್ಷ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ಇದರ ಪ್ರೊಸೆಸಿಂಗ್ ಚಾರ್ಜ್ ಆಗಿ1.5 ಲಕ್ಷ ಮೊದಲು ಕಟ್ಟಬೇಕು. ಉಳಿದ 2.5 ಲಕ್ಷ ರೂ. ಗಳನ್ನು ಆರೋಪಿ ಹಂತ ಹಂತವಾಗಿ ಪಡೆಯುತ್ತಿದ್ದರಂತೆ. ಅದರಂತೆ ದಿನಾಂಕ 05-11-2021 ರಂದು ಜೇಮ್ಸ್ ಅವರಿಂದ ಆರೋಪಿ ಶ್ರೀನಾಥ್ ಕೇರಳದ ಕಾಸರಗೋಡಿನ ಐಡಿಬಿಐ ಖಾತೆ ಸಂಖ್ಯೆ : 0450102000006705 ಇದಕ್ಕೆ ಸಂಪಾಜೆ ಕೆನರಾ ಬ್ಯಾಂಕ್ ಖಾತೆಯಿಂದ ರೂಪಾಯಿ 1.5 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿದ್ದರು. ಆದರೆ ನಂತರದಲ್ಲಿ ವಿಸಾವನ್ನು ಕಳುಹಿಸದೇ ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಬಗ್ಗೆ ಮಡಿಕೇರಿ ರೂರಲ್ ಪೊಲೀಸ್ ಠಾಣೆಯಲ್ಲಿ IPC 1860(U/S-417,420) ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.