ಬಂಟ್ವಾಳ : ಪದೇ ಪದೆ ರಾಜಧರ್ಮವನ್ನು ಉಲ್ಲೇಖಿಸುವ ಬಿಜೆಪಿ ಆಡಳಿತ ಇಂದು ಕ್ಷೇತ್ರದಲ್ಲಿ ತಾರತಮ್ಯ ಎಸಗುತ್ತಿದ್ದು, ಇದು ಮುಂದುವರಿದರೆ ಬಸ್ಸಿನೆದುರು ಅಡ್ಡ ಮಲಗುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶವ್ಯಕ್ತಪಡಿಸಿದ್ದಾರೆ.
ಮಂಗಳವಾರ ದಿಢೀರ್ ತಮ್ಮ ಬೆಂಬಲಿಗರೊಂದಿಗೆ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ರೈ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಕೆಎಸ್ಆರ್ಟಿಸಿ ಐಸಿಯು ಬಸ್ಗಳು, ಕಾಂಗ್ರೆಸ್ ಮತ್ತಿತರ ಪಕ್ಷ ಬೆಂಬಲಿತರ ಆಡಳಿತ ಇರುವ ಪಂಚಾಯಿತಿ ಊರಿಗೆ ಬರುವುದಿಲ್ಲ. ಬಿಜೆಪಿ ಬೆಂಬಲಿತರ ಆಡಳಿತವಿದ್ದ ಪಂಚಾಯಿತಿಗೆ ಮಾತ್ರ ಬರುತ್ತದೆ. ಕಾರ್ಮಿಕರಿಗೆ ಕಿಟ್ ಅರ್ಹರ ಕೈಸೇರುತ್ತಿಲ್ಲ.
ಯಾರ್ಯಾರೋ ಇದನ್ನು ವಿತರಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆ ಮೇಲೆ ಬೆದರಿಕೆ ಕುರಿತು ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ. 94 ಸಿ ಸವಲತ್ತು ಅರ್ಹರಿಗೆ ವಿತರಣೆ ಆಗಬೇಕು ಎಂಬ ಹಲವು ವಿಚಾರಗಳ ಕುರಿತು ತಹಶೀಲ್ದಾರರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.