ಕರ್ನಾಟಕ

karnataka

ETV Bharat / state

ಸುರೇಶ್ ಅಂಗಡಿ ನಿಧನದಿಂದ ಹಿರಿಯ ಸಹೋದರನನ್ನು ಕಳೆದುಕೊಂಡಂತಾಗಿದೆ: ನಳಿನ್ ಕುಮಾರ್ ಸಂತಾಪ - Floral tribute to Suresh angadi news 2020

ಉತ್ತಮ ಸಚಿವನೋರ್ವನನ್ನು ಕಳೆದುಕೊಂಡಿರುವುದರಿಂದ ರಾಷ್ಟ್ರಕ್ಕೂ ನಷ್ಟವಾಗಿದೆ ಎಂದು ಸುರೇಶ್ ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಸಂತಾಪ ಸೂಚಿಸಿದರು.

Floral tribute to Suresh angadi by nalin kumar katil
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

By

Published : Sep 24, 2020, 2:15 PM IST

ಮಂಗಳೂರು: ಸುರೇಶ್ ಅಂಗಡಿಯವರ ನಿಧನದಿಂದ ಹಿರಿಯ ಸಹೋದರನನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ನುಡಿ ನಮನ ಸಲ್ಲಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ‌ ಸಭೆಯಲ್ಲಿ ಭಾಗವಹಿಸಿದ ಅವರು, ಸುರೇಶ್ ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಉತ್ತಮ ಸಚಿವನೋರ್ವನನ್ನು ಕಳೆದುಕೊಂಡಿರುವುದರಿಂದ ರಾಷ್ಟ್ರಕ್ಕೂ ನಷ್ಟವಾಗಿದೆ ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಸಂತಾಪ

ಕಠಿಣ ಪರಿಶ್ರಮಿಯಾದ ಅವರು ತಮ್ಮ ಖಾತೆಗೆ ಸಂಬಂಧಿಸಿದಂತೆ ಎಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರೋ, ಅಷ್ಟೇ ಕೆಲಸವನ್ನು ಪಕ್ಷ ಬೆಳಸುವಲ್ಲಿಯೂ ಮಾಡಿದ್ದರು. ಇಂದು ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಬೆಳೆಯುವಲ್ಲಿ ಸುರೇಶ್ ಅಂಗಡಿಯವರ ಕೊಡುಗೆ ಬಹಳಷ್ಟಿದೆ. ‌ಬೆಳಗಾವಿ ಅತಿ ದೊಡ್ಡ ಜಿಲ್ಲೆ‌ಯಾಗಿದ್ದು, ಅಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರಿದ್ದಾರೆ. ಅಲ್ಲಿ ಬಿಜೆಪಿಯ ಅತೀ ಹೆಚ್ಚು ಶಾಸಕರು ಗೆಲುವಿನ ಹಿಂದೆ ಸುರೇಶ್ ಅಂಗಡಿಯವರ ಶ್ರಮ ಸಾಕಷ್ಟಿದೆ ಎಂದು ಸ್ಮರಿಸಿದರು.

ನಾನು ಸಂಸದನಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಸಂಸತ್ ಸಭೆಗೆ ಹೋದಾಗ ಬಹಳ ಹತ್ತಿರವಾಗಿ ಕಂಡವರು ಸುರೇಶ್ ಅಂಗಡಿ. ಅವರ ವ್ಯಕ್ತಿತ್ವವೇ ಪ್ರತಿಯೊಬ್ಬರಲ್ಲಿಯೂ ಪ್ರೀತಿ, ಸಹೋದರತೆ ಕಾಣುವಂತದ್ದು. ಸುದೀರ್ಘವಾಗಿ 11 ವರ್ಷಗಳ ಕಾಲ ಲೋಕಸಭೆಯಲ್ಲಿ ಸುರೇಶ್ ಅಂಗಡಿಯವರ ಜೊತೆಗಿದ್ದೆ, ಒಂದು ದಿನವೂ ಅವರಲ್ಲಿ ಆಕ್ರೋಶ, ಆವೇಶ, ಉದ್ವೇಗಗಳನ್ನು ಕಂಡಿಲ್ಲ. ಲೋಕಸಭಾ ಸದಸ್ಯನೋರ್ವ ಹೇಗೆ ಸರಳ, ಸಜ್ಜನಿಕೆಯಿಂದ ಇರಬಹುದು ಅನ್ನೋದಕ್ಕೆ ಅವರು ಉದಾಹರಣೆಯಾಗಿದ್ದರು. ಪಕ್ಷದ ಸಿದ್ಧಾಂತ, ವಿಚಾರ ಹಾಗೂ ನಿಷ್ಠೆಯಲ್ಲಿ ಎಂದು ರಾಜಿ ಮಾಡದಂತಹ ವ್ಯಕ್ತಿತ್ವದವರು ಎಂದು ನಳಿನ್​ ಕುಮಾರ್​ ಬಣ್ಣಿಸಿದರು.

ಬೆಳಗಾವಿಯ ಲೋಕಸಭಾ ಸದಸ್ಯರಾಗಿರೋದು ಬಹಳ ಕಷ್ಟದ ಕೆಲಸ. ಅಲ್ಲಿ ಮರಾಠಿ ಹಾಗೂ ಕನ್ನಡ ಎರಡು ಭಾಷೆಗಳ ಸಮಸ್ಯೆಯಿದೆ. ಈ ಸಂದರ್ಭ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿರುವ ಸಮಸ್ಯೆಗೆ ಉತ್ತರದಾಯಿತ್ವವಾಗಿದ್ದರು. ಆದ್ದರಿಂದ ಅವರು ಆ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದರು ಎಂದು ನೆನಪಿಸಿಕೊಂಡರು.

ಈ ಬಾರಿ ನರೇಂದ್ರ ಮೋದಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದು, ಯಾವುದೇ ರೈಲ್ವೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಕ್ಷಣ ಉತ್ತರ ನೀಡುತ್ತಿದ್ದರು.‌ ಎರಡು ಮೂರು ಬಾರಿ ಮಂಗಳೂರಿನಿಂದ ನಿಯೋಗವನ್ನು ಕೊಂಡೊಯ್ದಿದ್ದೆ. ನಿಯೋಗದಲ್ಲಿದ್ದವರಿಗೆ ಇವರ ಸರಳತೆ ಕಂಡು ಆಶ್ಚರ್ಯವಾಗಿತ್ತು. ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ಅತೀ ಹೆಚ್ಚು ಕೊಡುಗೆಗಳನ್ನು ನೀಡಿದ್ದರು. ರೈಲ್ವೆಗೆ ಸಂಬಂಧಿಸಿ, ಮಂಗಳೂರಿಗೆ ಇಷ್ಟರವರೆಗೆ ಬಂದಿದ್ದಕ್ಕಿಂತ ಇವರ ಕಾಲದಲ್ಲಿ ಅತೀ ಹೆಚ್ಚು ಹೊಸ ಯೋಜನೆಗಳು ಬಂದಿವೆ‌ ಎಂದು ವಿವರಿಸಿದರು.

ABOUT THE AUTHOR

...view details