ಮಂಗಳೂರು: ಪ್ರಸಕ್ತ ಋತುವಿನ ಮೊದಲ ವಿದೇಶಿ ಪ್ರವಾಸಿ ಹಡಗು 'ಸೆವೆನ್ ಸೀಸ್ ನ್ಯಾವಿಗೇಟರ್' ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನವ ಮಂಗಳೂರು ಬಂದರಿನ ಬರ್ತ್ ನಂ.04ರಲ್ಲಿ ಲಂಗರು ಹಾಕಿತು. ಬಹಾಮಾಸ್ ಧ್ವಜದ ಈ ಹಡಗು ಸುಮಾರು 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಯೊಂದಿಗೆ ಬಂದಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ 'ಚೆಂಡೆ' ಮತ್ತು 'ಯಕ್ಷಗಾನ' ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಪ್ರವಾಸಿಗರು ಕರ್ನಾಟಕ ಕಲಾಪ್ರಕಾರದ ಫೋಟೋಗಳನ್ನು ತೆಗೆದುಕೊಂಡು ಖುಷಿಪಟ್ಟರು. ಕ್ರೂಸ್ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಹ್ಲಾದಕರ ಅನುಭವ ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಪಾಸಣೆ, ತ್ವರಿತ ಸಂಚಾರಕ್ಕಾಗಿ ಕಸ್ಟಮ್ಸ್ ಕೌಂಟರ್‌ಗಳು ಮತ್ತು ಮಂಗಳೂರು ನಗರದಾದ್ಯಂತ ಸಂಚಾರಕ್ಕಾಗಿ ಬಸ್‌ಗಳು, ವಿಶೇಷ ಟ್ಯಾಕ್ಸಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ನವಮಂಗಳೂರು ಬಂದರಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಹಿರಿಯ ಪೋರ್ಟ್ ಆಫೀಸರ್‌ಗಳ ಉಪಸ್ಥಿತಿಯಲ್ಲಿ ಹಡಗಿನ ಮಾಸ್ಟರ್ ಮತ್ತು ಜಿಎಂ ಅವರನ್ನು ಸನ್ಮಾನಿಸಿದರು. ಬಂದರಿನಲ್ಲಿ ಆಯೋಜಿಸಲಾಗಿದ್ದ ಭರತನಾಟ್ಯ ಪ್ರದರ್ಶನ ಪ್ರಯಾಣಿಕರನ್ನು ರಂಜಿಸಿತು. ಪ್ರವಾಸೋದ್ಯಮ ಸಚಿವಾಲಯದ ದಕ್ಷಿಣ ಕನ್ನಡದ ಯಕ್ಷಗಾನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಸೆಲ್ಫಿ ಸ್ಟ್ಯಾಂಡ್ ಪ್ರಯಾಣಿಕರಿಗೆ ವಿಶೇಷ ಆಕರ್ಷಣೆಯಾಗಿತ್ತು.