ಕರ್ನಾಟಕ

karnataka

By

Published : Jan 31, 2023, 1:09 PM IST

ETV Bharat / state

ಕಂಬಳಗದ್ದೆಯಲ್ಲಿ ಪ್ರೇಯಸಿ ಜೊತೆಗಿದ್ದ ಯುವಕನಿಗೆ ಮಾಜಿ ಪ್ರೇಮಿ, ಸ್ನೇಹಿತರಿಂದ ಹಲ್ಲೆ

ಕಂಬಳ ಗದ್ದೆಯಲ್ಲಿ ಪ್ರೇಯಸಿಯೊಂದಿಗಿದ್ದ ಮಂಗಳೂರಿನ ಯುವಕನಿಗೆ ಯುವತಿಯ ಮಾಜಿ ಪ್ರೇಮಿ, ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Puttur
ಪುತ್ತೂರು ನಗರ ಪೊಲೀಸ್​​ ಠಾಣೆ

ಪುತ್ತೂರು (ದಕ್ಷಿಣ ಕನ್ನಡ): ಪ್ರೇಯಸಿಯೊಂದಿಗೆ ಕಂಬಳ ಗದ್ದೆಯಲ್ಲಿ ಮಾತನಾಡಿಕೊಂಡಿದ್ದ ಮಂಗಳೂರಿನ ಯುವಕನ ಮೇಲೆ ಯುವತಿಯ ಮಾಜಿ ಪ್ರೇಮಿ ಹಾಗೂ ಆತನ ಸ್ನೇಹಿತರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಕೋಡಿಕಲ್ ರಸ್ತೆ 17ನೇ ವಾರ್ಡ್ ಬಾಪೂಜಿ ನಗರದ ದಿ.ಶಂಕರ್‌ ಎಂಬುವವರ ಮಗ ಸಾಗರ್ (23) ಹಲ್ಲೆಗೊಳಗಾದ ಯುವಕ. ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಹಾಗೂ ಹೇಮಂತ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ವಿವರ: "ನಾನು ಜ.28ರಂದು ಪುತ್ತೂರು ಕಂಬಳಕ್ಕೆ ಬಂದಿದ್ದೆ. ಜ.29ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರಿಯತಮೆಯೊಂದಿಗೆ ಕಂಬಳ ಗದ್ದೆಯಲ್ಲಿ ಮಾತನಾಡುತ್ತಿದ್ದಾಗ ಕೌಶಿಕ್ ಎಂಬಾತ ನನ್ನ ಬಳಿ ಬಂದು, ನೀನು ಯಾರು?, ಎಲ್ಲಿಯವನು?, ನಿನಗೂ ಆಕೆಗೂ ಏನು ಸಂಬಂಧ? ಎಂದೆಲ್ಲ ಪ್ರಶ್ನಿಸಿದ್ದಾನೆ. ನಾನು ಆಕೆ ನನ್ನ ಲವ್ವರ್ ಎಂದು ಹೇಳಿದೆ."

"ಬಳಿಕ ನಾನು ಮತ್ತು ಜೊತೆಗಿದ್ದ ದುರ್ಗಾ ಪ್ರಸಾದ್‌ ಎಂಬುವವರನ್ನು ಕೌಶಿಕ್ ಪಕ್ಕಕ್ಕೆ ಕರೆದುಕೊಂಡು ಹೋಗಿ, ನಾನು ಆಕೆಯ ಲವ್ವರ್. ನೀನು ಯಾಕೆ ಆಕೆಯನ್ನು ಲವ್ ಮಾಡುತ್ತೀಯಾ? ಎಂದು ಪ್ರಶ್ನಿಸಿದ್ದಾನೆ. ಬಳಿಕ ನನ್ನನ್ನು ಮತ್ತು ದುರ್ಗಾ ಪ್ರಸಾದ್‌ ಅವರನ್ನು ಏಳ್ಮುಡಿ ಅಕ್ಷಯ ಚಿಕನ್ ಸೆಂಟರ್ ಬಳಿ ಬರುವಂತೆ ತಿಳಿಸಿದ್ದ. ನಾವು ಅಲ್ಲಿಗೆ ಹೋದಾಗ ಅಲ್ಲಿ ನನ್ನ ಪ್ರಿಯತಮೆ ಕೂಡ ಇದ್ದಳು."

"ಈ ವೇಳೆ ಕೌಶಿಕ್‌ನೊಂದಿಗೆ ಇತರ 6-7 ಜನ ಸ್ನೇಹಿತರಿದ್ದರು. ಅವರು, ಇಲ್ಲಿ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಜನರು ಇಲ್ಲದ ಸ್ಥಳಕ್ಕೆ ಹೋಗೋಣ ಎಂದು ತಿಳಿಸಿದರು. ಅದರಂತೆ ಆಲ್ಟೋ ಕಾರು ಹಾಗೂ ಮೋಟಾರ್ ಸೈಕಲ್​ನಲ್ಲಿ ಬಲ್ನಾಡ್‌ನಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋಗಿದ್ದೆವು. ಅಲ್ಲಿ ಕೌಶಿಕ್ ಹಾಗೂ ಇತರ 6-7 ಜನರು ನನಗೆ ಹಾಗೂ ದುರ್ಗಾ ಪ್ರಸಾದ್‌ರ ಅವರಿಗೆ ಕೈಯಿಂದ ಹಾಗೂ ಕೈಗಳಲ್ಲಿ ಧರಿಸಿದ್ದ ಬಳೆಗಳಿಂದ ಹಲ್ಲೆ ನಡೆಸಿ ಆಕೆಯನ್ನು ಲವ್ ಮಾಡಬಾರೆಂದು ಬೆದರಿಸಿದ್ದಾರೆ. ಈ ವೇಳೆ ಬಿಡಿಸಲು ಬಂದ ದುರ್ಗಾ ಪ್ರಸಾದ್‌ ಅರವ ಮೇಲೆಯೂ ಹಲ್ಲೆ ನಡೆಸಿದರು."

ದೂರು ದಾಖಲು: "ಆಗ ನಾವು ಜೋರಾಗಿ ಬೊಬ್ಬೆ ಹೊಡೆದಾಗ ಸ್ಥಳೀಯರು ಓಡಿ ಬರುವುದನ್ನು ಕಂಡು ನಮ್ಮನ್ನುದ್ದೇಶಿಸಿ ಇನ್ನು ಮುಂದೆ ಆಕೆಯ ಸುದ್ದಿಗೆ ಬಂದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ. ಹಲ್ಲೆಯಿಂದ ಎಡ ಬದಿಯ ತಲೆ, ಬಲ ಪಕ್ಕೆಲುಬಿಗೆ ಹಾಗೂ ಎಡ ಕೈಗೆ ನೋವಾಗಿದೆ. ದುರ್ಗಾ ಪ್ರಸಾದ್‌ ಅರವರಿಗೆ ಕುತ್ತಿಗೆಯ ಭಾಗ ಹಾಗೂ ಎಡ ಕಾಲಿಗೆ ಗಾಯವಾಗಿದೆ" ಎಂದು ಸಾಗರ್‌ ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಆರೋಪಿಗಳಾದ ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್ ಹಾಗೂ ಹೇಮಂತ್ ವಿರುದ್ಧ ಐಪಿಸಿ ಕಲಂ- 143, 147, 323, 324, 506 ಹಾಗೂ 149 ರಡಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಬಳಸ್ಬೇಡ ಎಂದಿದ್ದೇ ತಪ್ಪಾಯ್ತು!: ಮತ್ತೊಂದೆಡೆ, ಅತಿಯಾಗಿ ಮೊಬೈಲ್ ಬಳಕೆ ಮಾಡುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ (ಜ.30) ಮಂಗಳೂರಿನಲ್ಲಿ ನಡೆದಿದೆ. ನಗರದ ಪದವು ಬಿ ಗ್ರಾಮದ ಕೋಟಿಮುರದ ರೆಡ್ ಬ್ರಿಕ್ಸ್ ಅಪಾರ್ಟ್ ಮೆಂಟ್​ನಲ್ಲಿರುವ ಜಗದೀಶ್ ಹಾಗೂ ವಿನಯ ದಂಪತಿಯ ಪುತ್ರ ಜ್ಞಾನೇಶ್ (14) ಮೃತ ಬಾಲಕ.

ನಗರದ ಕುಲಶೇಖರ ದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜ್ಞಾನೇಶ್ ವಿಪರೀತವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನಂತೆ. ಇದನ್ನು ಗಮನಿಸಿದ ತಾಯಿ ಗದರಿಸಿದ್ದರು. ಇದರಿಂದ ಮನನೊಂದು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಂಗೆ ಹೋಗಿದ್ದಾನೆ. ಸ್ನಾನ ಮಾಡಿ ಬರುವುದಾಗಿ ಹೇಳಿ ರೂಂಗೆ ಹೋದವನು ಬಾರದಿದ್ದಾಗ ಬಾಲಕನ ತಂದೆ ಜಗದೀಶ್ ಅವರು ಬಾತ್ ರೂಂ ಬಳಿಯಿರುವ ಕಿಟಕಿಯ ಮೂಲಕ ನೋಡಿದಾಗ ಬಾಲಕ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬಾಲಕನನ್ನು ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತ ಪಟ್ಟಿರುವುದು ತಿಳಿದು ಬಂದಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೊಲ್ಯ - ಅಡ್ಕ ರಸ್ತೆ ಅಪಘಾತ: ಸಹೋದರರಿಬ್ಬರು ಸಾವು, ಇಬ್ಬರಿಗೆ ಗಾಯ

ABOUT THE AUTHOR

...view details