ಕರ್ನಾಟಕ

karnataka

ETV Bharat / state

ಅಂಗವೈಕಲ್ಯ ಮೀರಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಎಂಡೋಪೀಡಿತ ಯುವಕ!

ಅಂಗವೈಕಲ್ಯ ಮೀರಿ ನಿಂತ ಎಂಡೋಪೀಡಿತನೊಬ್ಬ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಉಳಿದ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಈ ಸಾಧನೆ ಕಂಡು ಆತನ ಪೋಷಕರು ಸೇರಿದಂತೆ ಶಿಕ್ಷಕರು, ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Endo sufferer got government job
Endo sufferer got government job

By

Published : Sep 22, 2022, 7:05 PM IST

ದಕ್ಷಿಣ ಕನ್ನಡ:ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಜನಾರ್ದನ ಗೌಡ ಮತ್ತು ಬೇಬಿ ದಂಪತಿಯ ಪುತ್ರ ಪ್ರದೀಪ್ ಬಿ.ಜೆ (23) ಅವರು ಎಂಡೋಸಲ್ಫಾನ್ ಬಾಧೆಯಿಂದ ಕಾಡಿದ ಅಂಗವೈಕಲ್ಯವನ್ನು ಮೀರಿ ಇತ್ತೀಚೆಗೆ ಶಿವಮೊಗ್ಗದ ತೀರ್ಥಹಳ್ಳಿಯ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗನಾಗಿ (Village Accountant) ನೇಮಕಗೊಂಡಿದ್ದಾರೆ.

ಪ್ರತಿದಿನ ಅವರು ಮೊಣಕಾಲುಗಳ ಮೇಲೆ ನಡೆಯುತ್ತಾ ಕಚೇರಿಗೆ ಪ್ರವೇಶಿಸುತ್ತಿದ್ದಾರೆ. ಪ್ರದೀಪ್ ಅವರ ಕಾಲುಗಳು ಮೊಣಕಾಲಿನ ಕೆಳಗೆ ದುರ್ಬಲವಾಗಿವೆ. ಅವರ ಎಡಗೈಗೂ ಬಲವಿಲ್ಲ. ಆದಾಗ್ಯೂ ದೈಹಿಕ ಅಂಗವೈಕಲ್ಯ ಕಡೆಗಣಿಸಿದ ಅವರು, ಉತ್ತಮ ಶೈಕ್ಷಣಿಕ ದಾಖಲೆಯನ್ನು ಪಡೆದಿದ್ದಾರೆ. ಪ್ರಸ್ತುತ ಅವರು ತಮ್ಮ ಎಂಕಾಂ ವಿದ್ಯಾಭ್ಯಾಸವನ್ನೂ ಮುಂದುವರಿಸುತ್ತಿದ್ದಾರೆ.

ನನ್ನ ಜೀವನದ ಈ ಹೊಸ ಕೆಲಸದ ಪ್ರತಿ ನಿಮಿಷವನ್ನು ನಾನು ಆನಂದಿಸುತ್ತಿದ್ದೇನೆ. ನಾನು ನನ್ನ ಕುಟುಂಬದಿಂದ ದೂರವಿರುವುದರಿಂದ ಸ್ವತಂತ್ರವಾಗಿದ್ದು, ಕರ್ತವ್ಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಕೆಲಸದಲ್ಲಿರುವ ನನ್ನ ಹಿರಿಯರು ಮತ್ತು ಸಹೋದ್ಯೋಗಿಗಳು ನನಗೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಪ್ರದೀಪ್.

ಅತೀವ ಸಂತಸವಾಗಿದೆ;ನನ್ನ ಮಗನಿಗೆ ಕೆಲಸ ಸಿಕ್ಕಿದ್ದಕ್ಕೆ ನಮಗೆ ಅತೀವ ಸಂತೋಷವಾಗಿದೆ. ಆತನಿಗೆ ನಡೆಯಲು ಸಾಧ್ಯವಾಗದ ಕಾರಣ, 24 ಗಂಟೆಯೂ ಜೊತೆಗಿರುವ ಸಹಾಯಕರನ್ನು ನೇಮಿಸಿದ್ದೇವೆ ಎನ್ನುತ್ತಾರೆ ಪ್ರದೀಪ್ ತಂದೆ​. ಇಷ್ಟು ವರ್ಷ ನಾನೇ ಅವನನ್ನು ಎತ್ತಿಕೊಂಡು ನಡೆದಾಡುತ್ತಿದ್ದೆ. ರಜೆ ಇದ್ದಾಗ ತೀರ್ಥಹಳ್ಳಿಗೆ ಕರೆದುಕೊಂಡು ಹೋಗಿ ಅವನನ್ನು ಕರೆದುಕೊಂಡು ಬರುತ್ತೇನೆ. ಮಾನವೀಯ ನೆಲೆಯಲ್ಲಿ ಅವನಿಗೆ ನಮ್ಮ ತವರು ಊರಿನಲ್ಲಿ ಎಲ್ಲಾದರೂ ಪೋಸ್ಟಿಂಗ್ ಆದರೆ ತುಂಬಾ ಉಪಕಾರ ಆಗುತ್ತಿತ್ತು. ದೈಹಿಕ ಸವಾಲುಗಳು ಅವನ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಿಲ್ಲ.

ಅವನ ನೆನಪಿನ ಶಕ್ತಿ ಮತ್ತು ಗ್ರಹಿಸುವ ಶಕ್ತಿಯನ್ನು ಅವನ ಶಿಕ್ಷಕರು ಸಹ ಮೆಚ್ಚಿದ್ದರು ಎಂದು ಪ್ರದೀಪ್ ತಂದೆ ಜನಾರ್ದನ ಗೌಡ ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಂಗವೈಕಲ್ಯವನ್ನು ಮೀರಿ ಪ್ರದೀಪ್ ಬಿ.ಕಾಂನಲ್ಲಿ 79.16% ಅಂಕ ಗಳಿಸಿದ್ದಾರೆ. ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಕಲಿತ ಪ್ರದೀಪ್‌, 536 ಅಂಕ ಪಡೆದಿದ್ದಾರೆ.

ಇದನ್ನು ಓದಿ:ದಲಿತ ಬಾಲಕ ದೇವರನ್ನು ಮುಟ್ಟಿದ್ದಕ್ಕೆ ದಂಡದ ಬೆದರಿಕೆ.. ಕೋಲಾರದಲ್ಲಿ ಎಂಟು ಜನರ ಬಂಧನ

ABOUT THE AUTHOR

...view details