ಮಂಗಳೂರು: ದ.ಕ ಜಿಲ್ಲೆಯಲ್ಲಿರುವ 8 ಮೆಡಿಕಲ್ ಕಾಲೇಜುಗಳಲ್ಲಿ 4 ಮೆಡಿಕಲ್ ಕಾಲೇಜುಗಳಲ್ಲಿ ಮಾತ್ರ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದ್ದು, ಉಳಿದ ನಾಲ್ಕು ಕಾಲೇಜುಗಳಲ್ಲಿ ಯಾಕೆ ಪರೀಕ್ಷೆ ಮಾಡಲಾಗುತ್ತಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ ಎರಡೇ ವೈರಾಲಜಿ ಸೋಂಕು ತಪಾಸಣಾ ಲ್ಯಾಬ್ ಇದ್ದು, ಕೋವಿಡ್ ಸೋಂಕಿನ ಬಳಿಕ 64 ಲ್ಯಾಬ್ಗಳನ್ನು ತೆರೆಯಲಾಗಿದೆ. ಈಗಾಗಲೇ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಸ್ಯಾಂಪಲ್ ಟೆಸ್ಟ್ ಮಾಡೋದು ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಗಂಟಲು ದ್ರವ ತಪಾಸಣೆ ಮಾಡಲು ಆರಂಭಿಸಿದ ಮೆಡಿಕಲ್ ಕಾಲೇಜುಗಳು ಎರಡು ವಾರದೊಳಗಡೆ ತಮ್ಮ ಲ್ಯಾಬ್ನಲ್ಲಿ ಸೋಂಕು ತಪಾಸಣಾ ಕಾರ್ಯ ಆರಂಭಿಸಲೇಬೇಕು ಎಂಬ ಸೂಚನೆ ನೀಡಿದ್ದೇನೆ. ಇಲ್ಲದಿದ್ದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಸೋಂಕಿನ ಬಗ್ಗೆ ಜನರು ಬಹಳಷ್ಟು ಭಯಭೀತರಾಗಿದ್ದಾರೆ. ಈ ವೈರಾಣುವಿಗೆ ಅಂತಹ ಶಕ್ತಿ ಇಲ್ಲ. ಇದಕ್ಕಿಂತಲೂ ಪ್ರಬಲ, ಆಘಾತಕಾರಿಯಾಗಿರುವ ವೈರಾಣುವನ್ನು ನಾವು ನಿಭಾಯಿಸಿದ್ದೇವೆ. ನಿಶ್ಚಿತವಾಗಿ ಈ ಸೋಂಕಿಗೆ ಲಸಿಕೆ ದೊರಕಲಿದ್ದು, ಕಾಲಕ್ರಮೇಣ ಕಡಿಮೆ ಆಗಲಿದೆ. ಹಾಗಾಗಿ ಸೋಂಕಿತರನ್ನು ಯಾರೂ ಕಳಂಕಿತರನ್ನಾಗಿ ನೋಡುವ ಅವಶ್ಯಕತೆ ಇಲ್ಲ ಎಂದರು.
ಈ ನಡುವೆ ಎಲ್ಲರ ಜೀವನ ಸಹಜ ಸ್ಥಿತಿಗೆ ಬರಬೇಕಾಗಿರೋದರಿಂದ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಈಗಾಗಲೇ ಜನಜೀವನ ಒಂದು ಮಟ್ಟಿಗೆ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ಆದ್ದರಿಂದ ಶಾಲೆ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಆದರೆ 10 ವರ್ಷದ ಒಳಗಿನ ಮಕ್ಕಳ ಜೀವ ರಕ್ಷಣೆ ಬಹು ಮುಖ್ಯವಾಗಿದೆ.
ಕಾಲೇಜುಗಳನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ. ಅಲ್ಲದೆ ಅವರಿಗೆ ಆನ್ಲೈನ್ ಕ್ಲಾಸಸ್ ಕೂಡಾ ಮಾಡಲಾಗುತ್ತಿದೆ ಎಂದರು. ಆದರೆ ಶಾಲಾ ಮಕ್ಕಳಿಗೆ ತಂತ್ರಜ್ಞಾನದ ತೊಂದರೆ ಇರೋದರಿಂದ ಆನ್ಲೈನ್ ಕ್ಲಾಸಸ್ ಅಷ್ಟೊಂದು ಸಮಂಜಸ ಅಲ್ಲ. ಆದ್ದರಿಂದ ಜುಲೈ ಒಳಗೆ ಶಾಲೆ ತೆರೆಯುವ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ. ಅಂತಿಮವಾಗಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಡಾ. ಕೆ.ಸುಧಾಕರ್ ಹೇಳಿದರು.