ಕಡಬ (ದಕ್ಷಿಣಕನ್ನಡ):ಕುಮಾರಧಾರ ನದಿಗೆ ರೈತ ವಿರೋಧಿ ಯೋಜನೆಗಳನ್ನು ಅನುಷ್ಠಾನ ಮಾಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದಿಲ್ಲ: ಅನಂತ ಹೆಗಡೆ ಆಶೀಸರ - Dakshinakanda news
ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿ ರೈತರ ಕೃಷಿ ಭೂಮಿ ನಾಶ ಮಾಡುವ ಯೋಜನೆಗಳಿಗೆ ಅವಕಾಶ ನೀಡದೇ ಶಾಶ್ವತವಾಗಿ ನದಿಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಅನಂತ ಹೆಗಡೆ ಆಶೀಸರ ಹೇಳಿದ್ದಾರೆ.
ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿಯವರು ಪೆರಾಬೆ ಗ್ರಾಮದ ಉರುಂಬಿಯಲ್ಲಿ ಹಮ್ಮಿಕೊಂಡಿದ್ದ ನದಿ ಪೂಜೆ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಇಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿ ರೈತರ ಕೃಷಿ ಭೂಮಿ ನಾಶ ಮಾಡುವ ಯೋಜನೆಗಳಿಗೆ ಅವಕಾಶ ನೀಡದೇ ಶಾಶ್ವತವಾಗಿ ನದಿಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಲಾಗುವುದು.
ನಮ್ಮ ಹೋರಾಟದ ಫಲವಾಗಿ ಈಗಾಗಲೇ ಯೋಜನೆ ಸ್ಥಗಿತವಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎನ್ನುವ ಉದ್ದೇಶ ಈಡೇರುತ್ತಿದೆ. ಯಾಕೆಂದರೆ ಅಣೆಕಟ್ಟು ನಿರ್ಮಾಣ ಗುತ್ತಿಗೆ ಅವಧಿ ಮುಗಿದಿದೆ. ಇನ್ನು ಅವಕಾಶ ಸಿಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ನದಿಯ ಮೂಲ ಹಾಗೂ ನದಿಗಳ ಸಂರಕ್ಷಣೆ ದೃಷ್ಠಿಯಿಂದ ನೀರಿನ ಉಪಯುಕ್ತತೆಗೆ ಬೇಕಾಗುವ ಸಣ್ಣ-ಪುಟ್ಟ ಕಿಂಡಿ, ಅಣೆಕಟ್ಟುಗಳನ್ನು ಹೊರತುಪಡಿಸಿ ಕುಮಾರಧಾರ ನದಿ ಸೇರಿದಂತೆ ರಾಜ್ಯದ ಯಾವುದೇ ನದಿಗಳಿಗೆ ವಿದ್ಯುತ್ ಉತ್ಪಾದನೆಯ ಬೃಹತ್ ಯೋಜನೆಗಳಿಗೆ ಅವಕಾಶ ಖಂಡಿತಾ ಇಲ್ಲ ಎಂದರು.