ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಮಂಗಳೂರು(ದಕ್ಷಿಣ ಕನ್ನಡ): ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆಮಾಡಿದೆ. ಮೂರು ದಿನಗಳ ಹಬ್ಬ ದೀಪಾವಳಿಯಲ್ಲಿ ಗೋಪೂಜೆ ಮಾಡುವುದು ಒಂದು ವಿಶೇಷ. 33 ಕೋಟಿ ದೇವರು ನೆಲೆಸಿದ್ದಾರೆ ಎಂದು ನಂಬಲಾದ ಗೋವುಗಳನ್ನು ಆರಾಧಿಸುವ ಈ ಹಬ್ಬ ಕರಾವಳಿಯಾದ್ಯಂತ ಸಂಭ್ರಮದಿಂದ ನಡೆದಿದೆ.
ಕರಾವಳಿಯಾದ್ಯಂತ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆಯನ್ನು ಸಂಭ್ರಮದಿಂದ ನಡೆಸಲಾಯಿತು. ಮಂಗಳೂರಿನ ವಿವಿಧೆಡೆ ಗೋವುಗಳಿಗೆ ಅರ್ಚಕರಿಂದ ಗೋಪೂಜೆ ನಡೆಸಲಾಯಿತಾದರೆ , ಇನ್ನೂ ಹಲವೆಡೆ ಮನೆ ಮಂದಿ ಗೋವುಗಳಿಗೆ ಸಿಂಗರಿಸಿ ಗೋವುಗಳನ್ನು ಆರಾಧಿಸಿದರು. ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ , ದುರ್ಗಾವಾಹಿನಿಯ ಮರೋಳಿ ಖಂಡ ಸಮಿತಿಯಿಂದ ಗೋಪೂಜೆ ಸಂಭ್ರಮದಿಂದ ಆಚರಿಸಲಾಯಿತು.
ಗೋಪೂಜೆ ಮಹತ್ವ ಏನು? :ದೇವರೆಂದೇಪೂಜಿಸಲ್ಪಡುವ ಗೋವಿನಲ್ಲಿ 33 ಕೋಟಿ ದೇವರುಗಳು ನೆಲೆಸಿದ್ದಾರೆ. ಗೋವಿಗೆ ಪೂಜೆ ಮಾಡಿದರೆ 33 ಕೋಟಿ ದೇವರಿಗೆ ಸಮರ್ಪಿತವಾಗುತ್ತದೆ ಎಂಬ ನಂಬುಗೆ ಇದೆ. ಈ ಕಾರಣದಿಂದ ಈ ಮೂಕ ಪ್ರಾಣಿಗೆ ದೀಪಾವಳಿ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ. ಗೋವಿಗೆ ವಸ್ತ್ರ, ಅನ್ನ, ಬಂಗಾರ, ಪುಷ್ಪಗಳನ್ನು ಸಮರ್ಪಿಸಿ ಆರಾಧಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಮರೋಳಿ ಸೂರ್ಯನಾರಾಯಣ ದೇವಾಲಯದ ಅರ್ಚಕ ಗಣಪತಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಸಕಲ ದೇವಾನುದೇವತೆಗಳ ವಾಸಸ್ಥಾನ ಋಷಿಮುನಿಗಳು ಸೃಷ್ಟಿಸಿದ ಕಾಮಧೇನುವಿನಲ್ಲಿ 33 ಕೋಟಿ ದೇವತೆಗಳು ವಾಸವಿದ್ದಾರೆ. ಗೋವಿನ ಕಾಲಿನಲ್ಲಿ ಅಶ್ವಿನಿ ದೇವತೆಗಳು, ಕೆಚ್ಚಲಿನಲ್ಲಿ ಔಷಧ, ವನಸ್ಪತಿಗಳು, ಕಣ್ಣಿನಲ್ಲಿ ಸೂರ್ಯಚಂದ್ರ ಸೇರಿದಂತೆ ಒಂದೊಂದು ವಿಧದಲ್ಲಿ ದೇವರುಗಳು ಇದ್ದಾರೆ. ಕಲಿಯುಗದಲ್ಲಿ ಯಾವುದೇ ಕೆಲಸ ಕಾರ್ಯ ಆರಂಭಿಸಬೇಕಾದರೆ ವಿಘ್ನ ನಿವಾರಣೆಗೆ ಎಲ್ಲ ದೇವತೆಗಳನ್ನು ಆರಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕಪಿಲ ಮುನಿಗಳು ತಪಸ್ಸಿನ ಮೂಲಕ ಗೋವನ್ನು ಸೃಷ್ಟಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ಮಾಡಿದರೆ ಎಲ್ಲ ದೇವತೆಗಳ ಆಶೀರ್ವಾದಗಳು ಜನರಿಗೆ ಸಿಗುತ್ತದೆ ಎಂದು ನಂಬಲಾಗತ್ತದೆ ಎನ್ನುತ್ತಾರೆ.
ಈ ಬಗ್ಗೆ ಮಾತನಾಡಿದ ಸಂಘಟಕ ಗಣೇಶ್ ಶೆಟ್ಟಿ, " ಗೋಪೂಜೆ ವರ್ಷಂಪ್ರತಿ ಆಚರಿಸುತ್ತಿದ್ದೇವೆ. ಗೋ ಸಂಪತ್ತು ರಕ್ಷಿಸುವುದು ಹಿಂದೂ ಸನತಾನ ಸಂಸ್ಕೃತಿಯ ಮುಖ್ಯ ಅಂಗ. ಯಾವುದೇ ಶುಭ ಕಾರ್ಯದಲ್ಲಿ ಗೋಮಾತೆಯನ್ನು ಆರಾಧಿಸುವುದು ನಮ್ಮ ಕರ್ತವ್ಯ. ಗೋವು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಗೋವಿಗೆ ಅಪಚಾರವಾದಾಗ ಅದನ್ನು ರಕ್ಷಿಸಬೇಕಾಗಿದೆ ಎಂದರು.
ಇದನ್ನೂ ಓದಿ :ದೀಪಾವಳಿ ಸಂಭ್ರಮ: ಮಂಗಳೂರಲ್ಲಿ ಗೂಡುದೀಪ ಸ್ಪರ್ಧೆ, ಗಮನ ಸೆಳೆದ 500ಕ್ಕೂ ಹೆಚ್ಚು ಆಕಾಶದೀಪಗಳು