ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯ ವತಿಯಿಂದ ನಡೆಯುವ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವವನ್ನು ಇಂದು ಮೀನುಗಾರಿಕೆ, ಬಂದರು, ಮುಜರಾಯಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಅ.7ರಂದು ನಡೆಯುವ ಮೆರವಣಿಗೆಯ ಉದ್ಘಾಟನೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಭಿವೃದ್ಧಿ ರೂವಾರಿ ಜನಾರ್ಧನ ಪೂಜಾರಿಯವರು ದೇವಳದ ಅಧ್ಯಕ್ಷ ಸಾಯಿರಾಂ ಅವರಿಗೆ ಧ್ವಜ ನೀಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ.. ಈ ವೇಳೆ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಡೀ ರಾಷ್ಟ್ರಕ್ಕೆ, ರಾಜ್ಯಕ್ಕೆ ಮಾದರಿಯಾಗಿದೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಸುವ ದಸರಾ. ನಾವು ಎಲ್ಲೇ ದಸರಾ ಕಾರ್ಯಕ್ರಮಕ್ಕೆ ಹೋದರು ಅಲ್ಲಿ ಇರುವ ಬೇಡಿಕೆ, ಇಡೀ ದಸರಾ ಕಾರ್ಯಕ್ರಮದ ಖರ್ಚು ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು. ಆದರೆ, ಭಕ್ತರ ಸ್ವಯಂಪ್ರೇರಣೆಯಿಂದ ಈ ರಾಜ್ಯದಲ್ಲಿ ಯಾವುದಾದರೂ ದಸರಾ ನಡೆಯುತ್ತಿದ್ದರೆ ಅದು ಕುದ್ರೋಳಿ ಗೋಕರ್ಣನಾಥ ದಸರಾ ಎಂದು ಹೇಳಿದರು.
ಇಲ್ಲಿನ ಅಚ್ಚುಕಟ್ಟುತನ, ನಂಬಿಕೆ, ಶ್ರದ್ಧೆ, ವೈಚಾರಿಕ ವಿಚಾರಗಳು, ಸೈದ್ಧಾಂತಿಕತೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳಿಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಾದರಿಯಾಗಿ ನಿಲ್ಲುತ್ತದೆ ಎಂದರು.