ಸವಣೂರು(ದಕ್ಷಿಣ ಕನ್ನಡ): ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿರುವ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಲಾಗಿದೆ. ಸಭೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲಾಗಿದ್ದು, ಒಗ್ಗಟ್ಟಿನಿಂದ ಮುನ್ನಡೆಯುವ ಅಭಿಪ್ರಾಯಕ್ಕೆ ಎಲ್ಲರೂ ಜೈಕಾರ ಹಾಕಿದ್ದಾರೆ.
ಶಾಲಾ ಕೊಠಡಿಯಲ್ಲಿ ನಮಾಜ್ ಪ್ರಕರಣ ಇತ್ಯರ್ಥ ಶಾಲೆಯಲ್ಲಿ ನಡೆದಿರುವ ಘಟನೆ ಬರುವ ದಿನಗಳಲ್ಲಿ ಮರುಕಳಿಸುವುದಿಲ್ಲ, ಸರ್ಕಾರಿ ಶಾಲೆಯಲ್ಲಿರುವ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಮಾಡಿಕೊಳ್ಳುವ ಶಾಲಾಭಿವೃದ್ದಿಯ ನಿರ್ಣಯಕ್ಕೆ ಎಲ್ಲಾ ಪೋಷಕರು ಬದ್ಧರಾಗಿದ್ದಾರೆಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ತಿಳಿಸಿದರು.
ಶಾಲೆಯ ಕೊಠಡಿಯೊಂದರಲ್ಲಿ ಶುಕ್ರವಾರ ವಿದ್ಯಾರ್ಥಿಗಳು ನಮಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅಂಕತ್ತಡ್ಕ ಶಾಲೆಯಲ್ಲಿ ಅಧಿಕಾರಿಗಳು, ಎಸ್ಡಿಎಂಸಿ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದ್ದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದು, ಶಾಲೆಯಲ್ಲಿ ನಡೆದ ಘಟನೆ ಅನಿರೀಕ್ಷಿತವಾಗಿದೆ. ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವುದು ಇಲ್ಲಿನ ಶಿಕ್ಷಕರಿಗೆ ಶುಕ್ರವಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಎಸ್ಡಿ ಎಂಸಿ ಪದಾಧಿಕಾರಿಗಳು ದೂರು ನೀಡಿದರು.
ತುರ್ತು ಸಭೆಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯುವ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲಾ ವರ್ಗದ ಜನರಿಗೆ ಸಮಾನತೆಯಲ್ಲಿ ಶಿಕ್ಷಣ ನೀಡುವುದು ಶೈಕ್ಷಣಿಕ ಧರ್ಮವಾಗಿದೆ. ಶೈಕ್ಷಣಿಕ ಚಟುವಟಿಕೆಗಳು, ಕಾನೂನಿನ ಬಗ್ಗೆ ಪೊಷಕರಿಗೆ ತಿಳಿಯಪಡಿಸುವುದು ಶಾಲೆಯಲ್ಲಿ ಗೊಂದಲದ ವಾತಾವರಣ ಉಂಟು ಮಾಡುವ ಯಾವುದೇ ಘಟನೆಗಳೂ ನಡೆಯಬಾರದು ಎನ್ನುವ ಅಭಿಪ್ರಾಯಕ್ಕೆ ಎಸ್ಡಿಎಂಸಿಯ ಎಲ್ಲ ಪದಾಧಿಕಾರಿಗಳು ಬಂದಿದ್ದಾರೆಂದು ತಿಳಿಸಿದ್ದಾರೆ.