ಪುತ್ತೂರು:ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಯಲು, ವೈದ್ಯರು ಮತ್ತು ಸಾರ್ವಜನಿಕರ ನಡುವೆ ನಂಬಿಕೆ, ವಿಶ್ವಾಸ ಬೆಳೆಸಲು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರಿಬ್ಬರು ಬೆಂಗಳೂರಿನಿಂದ ಮಂಗಳೂರಿನ ತನಕ ಸೈಕಲ್ ಜಾಥಾ ನಡೆಸುತ್ತಿದ್ದು, ಮಂಗಳವಾರ ಪುತ್ತೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಐಸಿಯು ತಜ್ಞ ವೈದ್ಯರಾದ ಡಾ. ಜಸ್ಟೀನ್ ಗೋಪಾಲ್‌ದಾಸ್ ಮತ್ತು ಡಾ. ನಿಖಿಲ್ ನಾರಾಯಣ ಸ್ವಾಮಿ ಅವರು ವೈದ್ಯರ ಮತ್ತು ಸಾರ್ವಜನಿಕರ ನಡುವೆ ಇರುವ ಅಪನಂಬಿಕೆ ತಡೆಯುವ ನಿಟ್ಟಿನಲ್ಲಿ ಮತ್ತು ಪರಸ್ಪರ ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ. ಬೆಂಗಳೂರಿನ ಐಎಂಎ ಹಾಲ್ ಬಳಿಯಿಂದ ಭಾನುವಾರ ಬೆಳಗ್ಗೆ ಎರಡು ಸೈಕಲ್‌ಗಳಲ್ಲಿ ಹೊರಟಿರುವ ಡಾ. ಜಸ್ಟೀನ್ ಗೋಪಾಲ್‌ದಾಸ್ ಮತ್ತು ಡಾ. ನಿಖಿಲ್ ನಾರಾಯಣ ಸ್ವಾಮಿ ಅವರು ಸುಮಾರು 400 ಕಿ. ಮೀ ದೂರದ ಸಂಚಾರದಲ್ಲಿ ವೈದ್ಯ ಸೇವೆಯ ಅರಿವು ಮೂಡಿಸಲಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ಸರಿಯಲ್ಲ:
ಮಂಗಳವಾರ ಮಧ್ಯಾಹ್ನ ಪುತ್ತೂರು ನಗರಕ್ಕೆ ಆಗಮಿಸಿದ ಅವರು ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬದಲಾವಣೆಯ ಉದ್ದೇಶಕ್ಕಾಗಿ ಈ ಜಾಥಾ ಹಮ್ಮಿಕೊಂಡಿದ್ದೇವೆ ಎಂದ ಅವರು, ವೈದ್ಯರ ಮತ್ತು ಜನರ ನಡುವೆ ಉತ್ತಮ ಸಂವಹನದ ಅಗತ್ಯವಿದೆ. ಜನರು ವೈದ್ಯರಲ್ಲಿ ನಂಬಿಕೆ ಇಡಬೇಕು ಮತ್ತು ವೈದ್ಯರು ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕ್ರಿಯೆ ಸರಿಯಲ್ಲ.