ಮಂಗಳೂರು: ರಾಷ್ಟ್ರೀಯ ಲಾಕ್ಡೌನ್ ಮತ್ತು ಕೋವಿಡ್-19 ನಿಯಂತ್ರಣದಲ್ಲಿ ಕೇಂದ್ರ ಸರಕಾರದ ವಿಫಲತೆ ಮತ್ತು ಜನವಿರೋಧಿ ನೀತಿ ಖಂಡಿಸಿ ಸಿ.ಪಿ.ಐ.ಎಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ವಿರುದ್ಧ ಮಂಗಳೂರಿನಲ್ಲಿ ಸಿ.ಪಿ.ಐ.ಎಂ ಪ್ರತಿಭಟನೆ
ಕೇಂದ್ರ ಸರ್ಕಾರ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮಂಗಳೂರಿನ ತೊಕ್ಕೊಟ್ಟು ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ವಿನಯಾ ಎಸ್.ರಾವ್ ಮುಖೇನ ಪ್ರಧಾನಿಗೆ ಸಿ.ಪಿ.ಐ.ಎಂ ಮನವಿ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಉಳ್ಳಾಲ ವಲಯ ಸಿ.ಪಿ.ಐ.ಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ, ಭಾರತ ಸರ್ಕಾರ ಕೊರೊನಾ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್ಡೌನ್ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕರಿಗೆ ಕೆಲಸ, ಆಹಾರ, ವಸತಿ ಪೂರೈಸುವ ಬದಲು ಉದ್ಯೋಗ ಕಡಿತ, ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳನ್ನು ಜಾರಿಗೊಳಿಸಿ ಕಾರ್ಮಿಕರ ಮೇಲೆ ದಾಳಿ ಮಾಡುವಂತಹ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಸಿ.ಪಿ.ಐ.ಎಂ ಜಿಲ್ಲಾ ಸಮಿತಿ ಸದಸ್ಯ ಜಯಂತ್ ನಾಯಕ್ ಮಾತನಾಡಿ, ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ಜನಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ನಲ್ಲಿ ಘೋಷಣೆಯಾದ 20 ಲಕ್ಷ ಕೋಟಿಯಲ್ಲಿ ಕಾರ್ಮಿಕ ವರ್ಗದವರಿಗೆ 20% ರಿಕ್ಷಾ ಚಾಲಕರಿಗೆ ಕೇವಲ 10% ಮಾತ್ರ ಬಂದಿದೆ. ಇನ್ನುಳಿದ ಹಣವನ್ನು ಯಾವಾಗ ನೀಡುತ್ತೀರಿ, ಬೀಡಿ ಕಾರ್ಮಿಕರು ಸರಕಾರದ ಲೆಕ್ಕಕ್ಕೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು. ಮೋದಿಯವರ ಭಾಷಣ ಜನ ಸಾಮಾನ್ಯರಿಗೆ ಪೂರಕವಾಗಿ ಬದುಕುವಂತಹ ಭಾಷಣವಾಗಲಿ ಎಂದರು.