ಮಂಗಳೂರು: ಕೋವಿಡ್ ಎರಡನೇ ಅಲೆ ಹರಡುವಿಕೆ ದಿನೇ ದಿನೇ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ಸೋಂಕು ತಡೆಗೆ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ, ಪ್ರಕರಣಗಳ ಪ್ರಮಾಣ ಕಡಿಮೆಯಾಗಿಲ್ಲ. ಇದರ ಪರಿಣಾಮವೀಗ ಮತ್ತೊಮ್ಮೆ ಪ್ರತೀ ಕ್ಷೇತ್ರದ ಮೇಲೂ ಬಿದ್ದಿದ್ದು, ರಿಕ್ಷಾ ಮತ್ತು ಕ್ಯಾಬ್ ಚಾಲಕರನ್ನು ತೊಂದರೆಗೆ ಸಿಲುಕಿಸಿದೆ.
ಬಡ ಮತ್ತು ಮಧ್ಯಮ ವರ್ಗದಲ್ಲಿರುವ ಹಲವರು ರಿಕ್ಷಾ, ಕ್ಯಾಬ್ ಚಾಲಕರಾಗಿದ್ದು, ಇದೀಗ ಮಹಾಮಾರಿಗೆ ದಿಕ್ಕೇ ತೋಚದಂತಾಗಿದ್ದಾರೆ. ಸದ್ಯ ಇವರು ಸರ್ಕಾರದ ನೆರವಿಗೆ ಆಗ್ರಹಿಸುತ್ತಿದ್ದಾರೆ.
ಕೋವಿಡ್ ಎಫೆಕ್ಟ್ - ಆಟೋ ಚಾಲಕರು ಏನಂತಾರೆ? ಕೊರೊನಾ ಎರಡನೇ ಅಲೆ ತಡೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಕಠಿಣ ಕರ್ಫ್ಯೂ ಜಿಲ್ಲೆಯ ಕ್ಯಾಬ್, ರಿಕ್ಷಾ ಚಾಲಕರ ಬದುಕನ್ನು ಬರಡಾಗಿಸಿದೆ. ಕೋವಿಡ್ ಭೀತಿಯಿಂದ ಜನರು ಮೊದಲೇ ಸಂಚಾರ ಕಡಿಮೆ ಮಾಡಿದ್ದರು. ಇದೀಗ ಕರ್ಫ್ಯೂ ಈ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಸೃಷ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 5 ಸಾವಿರದಷ್ಟು ರಿಕ್ಷಾ ಚಾಲಕರು ಮತ್ತು 1 ಸಾವಿರದಷ್ಟು ಕ್ಯಾಬ್ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಕೊರೊನಾ ಕರ್ಫ್ಯೂ ಘೋಷಣೆ ಬಳಿಕ ಇವರೆಲ್ಲ ಆತಂಕಕ್ಕೊಳಗಾಗಿದ್ದಾರೆ. ಬೆಳಗ್ಗಿನ ಹೊತ್ತಿನಲ್ಲಿ ಮಾತ್ರ ಇವರಿಗೆ ದುಡಿಮೆ ಮಾಡಲು ಸಾಧ್ಯವಾಗುತ್ತಿದೆ. ಬಳಿಕ ಜಿಲ್ಲೆಯಲ್ಲಿ ಬಂದ್ ವಾತಾವರಣವಿರುವುದರಿಂದ ಕ್ಯಾಬ್ ಮತ್ತು ಆಟೋ ಸಂಚಾರ ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ರಿಕ್ಷಾ ಮತ್ತು ಕ್ಯಾಬ್ ಚಾಲಕರು ಉತ್ತಮ ಬಾಡಿಗೆ ಮಾಡಲು ಪರದಾಡುತ್ತಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿಗಳು ರಿಕ್ಷಾ ಚಾಲಕರಿಗೆ 5,000 ರೂ. ಘೋಷಣೆ ಮಾಡಿದ್ದರೂ ಕೆಲವರಿಗೆ ಮಾತ್ರ ಆ ಪರಿಹಾರ ಸಿಕ್ಕಿದೆ. ಈ ಬಾರಿ ಕಳೆದ ಬಾರಿಗಿಂತಲೂ ರಿಕ್ಷಾ ಚಾಲಕರ ಬದುಕು ಕಂಗೆಟ್ಟಿದ್ದು, ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಕೋವಿಡ್ ಎರಡನೇ ಅಲೆಗೆ ನಡುಗಿದ ಕ್ಯಾಬ್ ಮಾಲೀಕರು-ಚಾಲಕರು!