ಮಂಗಳೂರು:ಹೋಟೆಲ್ ಕ್ಯಾಶ್ ಕೌಂಟರ್ನಲ್ಲಿ ದೈವಸ್ಥಾನಕ್ಕೆಂದು ಇಟ್ಟಿದ್ದ ಕಾಣಿಕೆ ಡಬ್ಬಿ ಕದ್ದ ಪ್ರಕರಣದ ಅಪರಾಧಿಗೆ ಒಂದು ವರ್ಷ ಕಾರಾಗೃಹ ವಾಸ ಹಾಗೂ ಎರಡು ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. ಬಂಟ್ವಾಳ ತಾಲೂಕಿನ ಕುಕ್ಕಾಜೆ ಬೈಲುಮನೆ ಇರಾ ಗ್ರಾಮದ ಮೊಹಮ್ಮದ್ ಆಸೀಫ್ ಕುಕ್ಕಾಜೆ(28) ಶಿಕ್ಷೆಗೊಳಗಾದ ವ್ಯಕ್ತಿ.
ಮಂಗಳೂರಿನ ಎರಡನೇ ಸಿಜೆಎಂ ನ್ಯಾಯಾಲಯವು ಆಸೀಫ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದೆ. ಆಸೀಫ್ ಕುಕ್ಕಾಜೆ 2021ರ ಮಾರ್ಚ್ 15ರಂದು ನಗರದ ಕಂಕನಾಡಿಯ ಕೆ.ಆರ್. ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿರುವ ಐಸಿರಿ ಎಂಬ ಹೋಟೆಲ್‌ನ ಕ್ಯಾಶ್ ಕೌಂಟರ್‌ನಲ್ಲಿದ್ದ ಕಂಕನಾಡಿ ಪಡುಮಲೆ ಕಲ್ಲುರ್ಟಿ ದೈವಸ್ಥಾನಕ್ಕೆ ಎಂದು ಇಟ್ಟಿದ್ದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ್ದ.
ಈ ಬಗ್ಗೆ ಹೋಟೆಲ್ ಮಾಲೀಕ ನವೀನ್ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಆರೋಪಿ ಮಹಮ್ಮದ್ ಆಸೀಫ್ ಕುಕ್ಕಾಜೆಯಿಂದ ಕಳವು ಮಾಡಿದ ಕಾಣಿಕೆ ಡಬ್ಬಿ ಹಾಗೂ ಅದರಲ್ಲಿದ್ದ 705.50 ರೂ.ವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.