ಕರ್ನಾಟಕ

karnataka

ETV Bharat / state

ರಕ್ತದಾನದ ಜಾಗೃತಿಯ ಸದ್ದುದ್ದೇಶ: ಮಂಗಳೂರಿನಿಂದ ಕಾರ್ಗಿಲ್​ಗೆ ದಂಪತಿ ಬೈಕ್ ಪ್ರಯಾಣ

18 ದಿನಗಳ ಕಾಲ ಪ್ರಯಾಣ ಮಾಡಲಿರುವ ಈ ಜೋಡಿ 13 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಿದೆ.

By

Published : Jul 28, 2023, 8:26 PM IST

Couple bike journey from Mangalore to Kargil
ಮಂಗಳೂರಿನಿಂದ ಕಾರ್ಗಿಲ್​ಗೆ ದಂಪತಿ ಬೈಕ್ ಪ್ರಯಾಣ

ಮಂಗಳೂರಿನಿಂದ ಕಾರ್ಗಿಲ್​ಗೆ ದಂಪತಿ ಬೈಕ್ ಪ್ರಯಾಣ

ಮಂಗಳೂರು: ಕೆಲವರ ಹವ್ಯಾಸ ವಿಚಿತ್ರವಾಗಿದ್ದರೆ, ಇನ್ನೂ ಕೆಲವರ ಹವ್ಯಾಸ ವಿಶೇಷ ಗುರಿಯ ಸದ್ದುದ್ದೇಶ ಹೊಂದಿರುತ್ತದೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸದ್ದುದ್ದೇಶದೊಂದಿಗೆ ಇಲ್ಲೊಂದು ದಂಪತಿ ಮಂಗಳೂರಿನಿಂದ ಕಾರ್ಗಿಲ್​ಗೆ ಬೈಕ್ ಪ್ರಯಾಣ ಆರಂಭಿಸಿದ್ದಾರೆ‌. ಮಂಗಳೂರಿನ ಕುಲಶೇಖರದ ಸೈಫ್ ಸುಲ್ತಾಬ್ ಮತ್ತು ಅವರ ಪತ್ನಿ ಅದೀಲ ಫರ್ಹೀನ್ ಕಾರ್ಗಿಲ್​ಗೆ ಬೈಕ್​ನಲ್ಲಿ ಪ್ರಯಾಣ ಬೆಳೆಸಲು ಹೊರಟ ದಂಪತಿ.

ಈ ದಂಪತಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಗಳೂರಿನಿಂದ ಕಾರ್ಗಿಲ್​ಗೆ ಬೈಕ್ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದಾರೆ. ಜೀವ ರಕ್ಷಕ ಕಲೆಯ ಕೋಚ್ ಹಾಗೂ ಪ್ರೇರಣಾತ್ಮಕ ಭಾಷಣಕಾರರಾಗಿ ಗುರುತಿಸಿಕೊಂಡಿರುವ ಸೈಫ್ ಸುಲ್ತಾನ್ ತಮ್ಮ ಬಿಎಂಡಬ್ಲ್ಯು ಜಿಎಸ್ 310 ಬೈಕ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಇವರು ಸುಮಾರು 3,800 ಕಿ.ಮೀ.ಗಳ 18 ದಿನಗಳ ಕಾಲ ತಮ್ಮ ಬೈಕ್‌ ಪಯಣದ ವೇಳೆ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

ಪ್ರತಿ ದಿನ 7 ಗಂಟೆಗಳ ಕಾಲ ಪ್ರಯಾಣ: ಸೈಫ್ ಸುಲ್ತಾನ್ ಮಂಗಳೂರಿನ ಲಯನ್ಸ್ ಕ್ಲಬ್​ನಲ್ಲಿ ಇಂದು ತಮ್ಮ ಕಾರ್ಗಿಲ್ ಪ್ರಯಾಣ ಆರಂಭಿಸಿದರು. ಈ ಬೈಕ್ ದಿನಕ್ಕೆ ಸುಮಾರು 300 ರಿಂದ 400 ಕಿ.ಮೀ. ಪ್ರಯಾಣ ಬೆಳೆಸಲಿದೆ. ಹೊನ್ನಾವರ, ಬೆಳಗಾವಿ, ಪುಣೆ, ಮುಂಬೈ, ಸೂರತ್, ಅಹ್ಮದಾಬಾದ್, ಉದಯಪುರ, ಜೈಪುರ, ದಿಲ್ಲಿ ಅಮೃತಸರ, ಜಮ್ಮು ಮತ್ತು ಶ್ರೀನಗರ ಮೂಲಕ ಸಾಗಿ ಆಗಸ್ಟ್ 15 ರಂದು ಕಾರ್ಗಿಲ್ ತಲುಪಲಿದ್ದಾರೆ. ನಿತ್ಯ 7 ಗಂಟೆಗಳ ಕಾಲ ಪ್ರಯಾಣ ಬೆಳೆಸಲಿದ್ದಾರೆ.

ಈ ಬಗ್ಗೆ ಸೈಪ್ ಸುಲ್ತಾನ್ ಮಾತನಾಡಿ, ರಕ್ತದಾನದ ಮಹತ್ವ ಸಾರುವುದು ನಮ್ಮ ಪ್ರಯಾಣದ ಪ್ರಮುಖ ಉದ್ದೇಶವಾಗಿದೆ. ಮಂಗಳೂರಿನಿಂದ ಕಾರ್ಗಿಲ್​​ಗೆ ಮೊದಲ ದಂಪತಿಯಾಗಿ ನಾವು ಹೋಗುತ್ತಿದ್ದೇವೆ. ಬ್ಯಾರಿ ಸಮುದಾಯದಿಂದ ಮಂಗಳೂರಿನಿಂದ ಕಾರ್ಗಿಲ್​ಗೆ ಬೈಕ್​ನಲ್ಲಿ ಹೋಗುವ ಮೊದಲ ದಂಪತಿಯಾಗಿದ್ದೇವೆ. ಇಲ್ಲಿ ಬೈಕ್ ಚಾಲನೆ ವೇಳೆ ನೀಡುವ ಭಾರತದ ಬಾವುಟವನ್ನು ಕಾರ್ಗಿಲ್​ನಲ್ಲಿ ಯೋಧರಿಗೆ ಆಗಸ್ಟ್​​​ 15 ರಂದು ಹಸ್ತಾಂತರಿಸಲಿದ್ದೇವೆ. ಇದರ ಜೊತೆಗೆ ಕನ್ನಡ ಬಾವುಟ ಮತ್ತು ತುಳುನಾಡಿನ ಬಾವುಟ ಕೊಂಡಯ್ಯಲಿದ್ದೇವೆ. 18 ದಿನದ ಪಯಣದಲ್ಲಿ 13 ಕಡೆ ರಕ್ತದಾನ ಶಿಬಿರವನ್ನು ಆಯೋಜಿಸಲಿದ್ದೇವೆ.

ಬೈಕ್ ರೈಡ್ ನನ್ನ ಹವ್ಯಾಸ. ಈಗ ನನ್ನ ಪತ್ನಿಯೂ ಜೊತೆಯಾಗಿದ್ದಾರೆ. ಈ ಬಾರಿ ಭಾರತ ಉದ್ದಗಲಕ್ಕೆ ಪ್ರಯಾಣ ಬೆಳೆಸಿ ದೇಶದ ಭಾವೈಕ್ಯ ಮತ್ತು ಸೌಂದರ್ಯ ಕಣ್ತುಂಬಿಕೊಳ್ಳುವ ಮಹತ್ತರ ಉದ್ದೇಶವಿದೆ. ಮುಂದಿನ ವರ್ಷ ಥಾಯ್ಲೆಂಡ್​, ಮಲೇಷಿಯಾ, ಬಳಿಕ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವ ಬಯಕೆಯೂ ಇದೆ ಎಂದು ಹೇಳುತ್ತಾರೆ.

ಆರಂಭದಲ್ಲಿ ಕಾರ್ಗಿಲ್​ಗೆ ಸೈಫ್ ಸುಲ್ತಾನ್ ಏಕಾಂಗಿಯಾಗಿ ಪ್ರಯಾಣಿಸಬೇಕೆಂದಿದ್ದರು. ಆದರೆ, ಅವರ ಪತ್ನಿಯೂ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜತೆಯಾಗಿ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ. ಪ್ರಯಾಣದ ನಿಮಿತ್ತ ಇಂದು ಬ್ಲಡ್ ಹೆಲ್ತ್‌ ಲೈನ್ ಕರ್ನಾಟಕ, ರೆಡ್ ಕ್ರಾಸ್ ರಕ್ತನಿಧಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಇದನ್ನೂ ಓದಿ:ಭೀಕರ ಪ್ರವಾಹ.. ಉತ್ತರ ಭಾರತಕ್ಕೆ ಬೈಕ್​ ರೈಡ್​ ಹೋಗಿದ್ದ ಕಾರವಾರದ ಯುವಕರು ಬದುಕಿ ಬಂದದ್ದೇ ಪವಾಡ!

ABOUT THE AUTHOR

...view details