ಕರ್ನಾಟಕ

karnataka

ETV Bharat / state

ಜೋಗಿಮಠದಲ್ಲಿ ಶ್ರೀ ಕಾಳಭೈರವ ವಿಗ್ರಹ ಪ್ರತಿಷ್ಠಾಪನೆ: ಮಠಾಧೀಶರ ವಿರುದ್ಧ ಆಕ್ಷೇಪ

ಮಂಗಳೂರು ಕದ್ರಿ ಶ್ರೀ ಜೋಗಿಮಠದಲ್ಲಿ ಎರಡು ಸಾವಿರ ವರ್ಷದ ಹಿಂದಿನ ಪುರಾತನ ಕಾಲದ ಕಾಳಭೈರವನ ವಿಗ್ರಹ ಬಿಟ್ಟು, ಸಣ್ಣ ಕಾಳಭೈರವನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

Press Conference by Harinath
ಶ್ರೀ ಜೋಗಿ ಮಠದ ಕಾರ್ಯನಿರ್ವಹಣಾ ಸಮಿತಿಯ ಅಧ್ಯಕ್ಷ ಹರಿನಾಥ್ ಅವರಿಂದ ಸುದ್ದಿಗೋಷ್ಠಿ

By

Published : Apr 7, 2023, 10:11 PM IST

ಮಂಗಳೂರು: ಕದ್ರಿ ಶ್ರೀ ಜೋಗಿ(ಯೋಗೀಶ್ವರ)ಮಠದ ಜೀರ್ಣೋದ್ಧಾರದ ವೇಳೆ ಎರಡು ಸಾವಿರ ವರ್ಷಗಳ ಪುರಾತನ ಕಾಲದ ಶ್ರೀ ಕಾಳಭೈರವನ ವಿಗ್ರಹವನ್ನು ಬದಲಾಯಿಸಿ, ರಾಜಸ್ಥಾನದ ಮಾರ್ವಾಡಿಗಳು ನೀಡಿರುವ ಸಣ್ಣ ಕಾಳಭೈರವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ‌. ಇದು ಮಠಾಧೀಶ ಶ್ರೀ ನಿರ್ಮಲನಾಥಜೀ ಮಹಾರಾಜ್ ಅವರು ಎಸಗಿರುವ ಅಕ್ಷಮ್ಯ ಅಪರಾಧ ಎಂದು ಶ್ರೀ ಜೋಗಿ(ಯೋಗೀಶ್ವರ) ಮಠದ ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಆರೋಪಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿಯ ಅಧ್ಯಕ್ಷ ಹರಿನಾಥ್ ಮಾತನಾಡಿ, ಪುರಾತನ ಕಾಳಭೈರವನ ಮೂರ್ತಿಗೆ ಸಂಬಂಧಿಸಿದಂತೆ ಡಿಸಿ ಅವರಿಂದ, ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕಿಲ್ಲ. ಕಾಳಭೈರವನ ಹಳೆಯ ವಿಗ್ರಹವನ್ನು ಸ್ವಾಮೀಜಿ ಅವರು 70 ಲಕ್ಷ ರೂ ಹಣಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದರು.

ಆದರೆ ಪುರಾತತ್ವ ಇಲಾಖೆಯಿಂದ ತಡೆಯಾಜ್ಞೆ ತಂದ ಬಳಿಕ ಈ ಮೂರ್ತಿಯನ್ನು ಅಲ್ಲಿ ಪರಶುರಾಮ ಯಜ್ಞಕುಂಡದ ಬಳಿ ಇಡಲಾಗಿದೆ.‌ ಅಲ್ಲದೇ ಇನ್ನಿತರ ಪುರಾತನ ವಿಗ್ರಹ ಜ್ವಾಲಾ ಮಹಮ್ಮಾಯಿ, ಮಹಾಕಾಳಿ ಇನ್ನಿತರ ಮೂರ್ತಿಗಳನ್ನು ನಿರ್ಲಕ್ಷ್ಯ‌ಮಾಡಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸದಾಗಿ ಗರ್ಭಗುಡಿ, ಸುತ್ತು ಪೌಳಿಗಳನ್ನು ನಿರ್ಮಾಣ ಮಾಡುವ ವೇಳೆ 2014ರಲ್ಲಿ ಜೋಗಿಮಠದ ಸಮಿತಿ ನಿರ್ಮಿಸಿದ್ದ ಸುತ್ತುಪೌಳಿ, ಗರ್ಭಗುಡಿಗಳನ್ನು ಒಡೆದು ಹಾಕಲಾಗಿದೆ‌. ಈ ಬಗ್ಗೆ ಮಠಾಧೀಶರು ಜೋಗಿ ಸಮುದಾಯದ ಯಾವ ಮಾತಿಗೂ ಬೆಲೆ ಕೊಡದೆ ನಿರ್ಲಕ್ಷ್ಯ ಮಾಡಿದ್ದಾರೆ‌ ಎಂದು ಆರೋಪಿಸಿದರು.

ಈಗಾಗಲೇ ಕದ್ರಿ ಮಠದ ವಿರುದ್ಧ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆವು. ನಮಗೆ ನ್ಯಾಯಬದ್ಧ ಆದೇಶ ದೊರಕುತ್ತಿದ್ದರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಕದ್ರಿ ಪೊಲೀಸರಿಗೂ ದೂರು ನೀಡಿದ್ದೇವೆ‌. ಆದರೆ ಕದ್ರಿ ಪೊಲೀಸರು ನಿಮ್ಮ ವಿಗ್ರಹವನ್ನು ನಾವು ಕಾಯಬೇಕು ಎಂದು ಹೇಳಿ ಉದ್ಧಟತನದಿಂದ ವರ್ತಿಸಿದ್ದಾರೆ‌. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಮುಂದಾಳುಗಳು ತಕ್ಷಣ ಮಧ್ಯಪ್ರವೇಶಿಸಿ ಧಾರ್ಮಿಕ ಸಂಘರ್ಷ ನಡೆಯದಂತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಇದನ್ನೂಓದಿ:ಫೈಟರ್ ರವಿ ವಿರುದ್ಧ ರೌಡಿಶೀಟ್​ ಮುಂದುವರೆಸಲು ಹೈಕೋರ್ಟ್ ತಡೆಯಾಜ್ಞೆ

ABOUT THE AUTHOR

...view details