ಬಂಟ್ವಾಳ: ತಾಲೂಕಿನ ಕೆಲವೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯುವಂತೆ ಜಿಲ್ಲಾಧಿಕಾರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ನೀಡಿದ ಮನವಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೆ ಮೂಲ ಕಾರಣವೇ ಕಾಂಗ್ರೆಸ್ ಎಂದು ಹೇಳಿದೆ.
ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆಗೆ ಕಾಂಗ್ರೆಸ್ ಮೂಲ ಕಾರಣ: ಬಿಜೆಪಿ ಆರೋಪ - ಬಂಟ್ವಾಳ
ರಮಾನಾಥ ರೈ ಅವರು 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿಯಾಗಿ ಸಕ್ರಮ ಮರಳುಗಾರಿಕೆಗೆ ಸಮರ್ಪಕ ಮರಳು ನೀತಿ ಮಾಡದೇ ಅಕ್ರಮ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಇದೀಗ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ವರ್ತನೆ ಖಂಡನೀಯ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾಧಿಕಾರಿಗೆ ರಮಾನಾಥ ರೈ ಇತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆದಿದ್ದನ್ನು ಯಾಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರ ಶಾಸಕರಾಗಿ ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ. ಅಲ್ಲದೇ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ ಅರ್ಹ ಬಡ ಕುಟುಂಬಗಳಿಗೆ ಕನಿಷ್ಠ ದರದಲ್ಲಿ ಮರಳು ಸಿಗುವಂತೆ ಮಾಡಿ ಸರ್ಕಾರದಿಂದ ನೂತನ ಮರಳುನೀತಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಮಾನಾಥ ರೈ ಅವರು 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿಯಾಗಿ ಸಕ್ರಮ ಮರಳುಗಾರಿಕೆಗೆ ಸಮರ್ಪಕ ಮರಳು ನೀತಿ ಮಾಡದೇ ಅಕ್ರಮ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಇದೀಗ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ವರ್ತನೆ ಖಂಡನೀಯ ಎಂದರು.
ಕ್ಷೇತ್ರ ಶಾಸಕರು ಜಯಗಳಿಸಿದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದ್ದು ಇಲಾಖಾ ಅಧಿಕಾರಿಗಳು ಯಾವುದೇ ಒತ್ತಡ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಆಕ್ರಮ ಚಟುವಟಿಕೆಗಳಿಗೆ ಶಾಸಕರು ಎಂದಿಗೂ ಪ್ರೋತ್ಸಾಹ ನೀಡುವುದು ಇಲ್ಲ. ಆಕ್ರಮ ಮರಳುಗಾರಿಕೆ ಸಹಿತ ಇತರ ಅಕ್ರಮ ಚಟುವಟಿಕೆಗೆ ಕಾಂಗ್ರೆಸ್ ಮೂಲ ಪ್ರೇರಣೆಯಾಗಿದ್ದು ಇವರ ಆಡಳಿತ ಸಮಯದಲ್ಲಿ ಏನೆಲ್ಲಾ ಆಗಿದೆ ಎಂಬುದರ ಬಗ್ಗೆ ರೈ ಅವರು ಆತ್ಮಾವಲೋಕನ ಮಾಡುವುದು ಒಳಿತು ಎಂದು ಬಿಜೆಪಿ ಕ್ಷೇತ್ರ ಸಮಿತಿ ಹೇಳಿದೆ.