ಬಂಟ್ವಾಳ: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಹೇಳಿಕೆ ಖಂಡಿಸಿ ವುಮೆನ್ಸ್ ಇಂಡಿಯಾ ಮೂವ್ಮೆಂಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿದೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಭಾಕರ ಭಟ್ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ್ದಾರೆ. ವಿಚ್ಚೇದಿತ ಮಹಿಳೆಯರಿಗೆ ಕಳಂಕ ಹಚ್ಚುವ ಹಾಗೂ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟುಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಸಂಘಟನೆಯವರು, ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುವಂಥ ಮಾತುಗಳನ್ನು ಆಡಿರುವ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದೇ ರೀತಿ ವುಮೆನ್ಸ್ ಇಂಡಿಯಾ ಮೂವ್ಮೆಂಟ್ ಸಂಘಟನೆಯಿಂದ ಪುತ್ತೂರು ನಗರ, ಉಪ್ಪಿನಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಗಳಿಗೆ ಪ್ರತ್ಯೇಕ ದೂರು ನೀಡಲಾಗಿದೆ. ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದ ಅವಮಾನಕರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಂಗಳೂರಿನಲ್ಲಿ ಈ ಕುರಿತು ಕಾಂಗ್ರೆಸ್ ವಕ್ತಾರೆ ಯು.ಟಿ. ಫರ್ಜಾನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.