ಬಂಟ್ವಾಳ :94ಸಿ ಜಾಗದ ಹಕ್ಕುಪತ್ರ ವಿತರಣೆಯಲ್ಲಿರುವ ತೊಡಕು ನಿವಾರಿಸಲು ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸುವುದಾಗಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಇಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ಮೂಲಕ 94ಸಿ ಜಾಗ ಒದಗಿಸುವ ಕುರಿತು ಇರುವ ತೊಡಕು ನಿವಾರಿಸಬೇಕು. ಕೊರೊನಾ ಸೋಂಕಿನಿಂದ ಸೀಲ್ಡೌನ್ ಆಗುವ ಮನೆಗಳಿಗೆ ಗ್ರಾಪಂನಿಂದಲೇ ರೇಷನ್ ಒದಗಿಸಬೇಕು. ನನೆಗುದಿಗೆ ಬಿದ್ದ ಕಾರ್ಯಗಳ ವಿಲೇವಾರಿಗೆ ಅಧಿಕಾರಿಗಳು ಚುರುಕಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಈ ಚುನಾಯಿತ ಜನಪ್ರತಿನಿಧಿಗಳು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ಕಂದಾಯ ಇಲಾಖೆ ಮಂಜೂರು ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ನೋಡಲಾಗುತ್ತದೆ. 94ಸಿ ಹಕ್ಕುಪತ್ರ ಮಂಜೂರು ಮಾಡುವ ವೇಳೆ ಡೀಮ್ಡ್ ಫಾರೆಸ್ಟ್ ನಂತಹ ತೊಡಕುಗಳಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಮಾಡಲಾಗುವುದು ಎಂದು ತಿಳಿಸಿದರು.