ಬಂಟ್ವಾಳ (ದಕ್ಷಿಣ ಕನ್ನಡ):ಇತ್ತೀಚಿನ ಕೆಲ ದಿನಗಳಿಂದ ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಗಗನಕಗ್ಕೇರಿರುವುದು ನಿತ್ಯ ಸುದ್ದಿಯಾಗ್ತಿದೆ. ಈ ನಡುವೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ನೋರ್ನಡ್ಕಪಡು ಎಂಬಲ್ಲಿ ಉದ್ಯಮಿಯೊಬ್ಬರು ತಮ್ಮ 14 ಎಕರೆ ಜಮೀನಿನಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಬೆಳೆಯಲ್ಲಿ ಉತ್ತಮ ಲಾಭ ಪಡೆದು ತೋರಿಸಿದ್ದಾರೆ ಬಂಟ್ವಾಳದ ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ.
ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿ ಕಂಡಿರುವ ಚಂದ್ರಹಾಸ ಶೆಟ್ಟಿ ತಮ್ಮ ಅನುಭವನ್ನು ಹೀಗೆ ಹಂಚಿಕೊಳ್ಳುತ್ತಾರೆ. ''ಡ್ರ್ಯಾಗನ್ ಫ್ರೂಟ್ ಬೆಳೆಗೆ ಪ್ರಾಣಿಗಳ ಕಾಟವಿಲ್ಲ, ನವಿಲು ಇಲ್ಲೆಲ್ಲಾ ಓಡಾಡುತ್ತಿದ್ದರೂ ಹಣ್ಣಿನ ಹತ್ತಿರ ಬರುವುದಿಲ್ಲ. ಈ ಬೆಳೆಗೆ ರೋಗಗಳ ಭಯವಿಲ್ಲ. ಬೆಳೆಗೆ ಕೇವಲ ಹಟ್ಟಿ ಗೊಬ್ಬರವನ್ನಷ್ಟೇ ಹಾಕಲಾಗಿದೆ. ಯಾವುದೇ ರಾಸಾಯನಿಕ ಹಾಕದೇ ಬೆಳೆಸಿದ್ದರಿಂದ ಉತ್ತಮ ಫಸಲೂ ಕೂಡಾ ಬಂದಿದೆ'' ಎಂದು ತಿಳಿಸಿದರು.
''ಲಾಕ್ ಡೌನ್ ಸಂದರ್ಭ ಯೂಟ್ಯೂಬ್ನಲ್ಲಿ ಬರುವ ವಿಡಿಯೋಗಳನ್ನೆಲ್ಲಾ ನೋಡುತ್ತಿದ್ದ ಸಂದರ್ಭ ಬೆಂಗಳೂರಿನ ಯಲಹಂಕದಲ್ಲಿ ಶ್ರೀನಿವಾಸ ರೆಡ್ಡಿ ಎಂಬವರು ಡ್ರ್ಯಾಗನ್ ಫ್ರೂಟ್ ಬೆಳೆದದ್ದನ್ನು ಗಮನಿಸಿದೆ. ನಮ್ಮ ಜಾಗದಲ್ಲೂ ನೆಟ್ಟಿದ್ದೇನೆ. 1 ವರ್ಷ ಮೂರು ತಿಂಗಳು ಆಯಿತು. ಮೂರು ತಿಂಗಳಲ್ಲಿ ಫಸಲು ಬಂದಿದೆ. ಇದುವರೆಗೆ 5 ಟನ್ ಡ್ರ್ಯಾಗನ್ ಫ್ರೂಟ್ ಬೆಳೆಸಿದ್ದೇನೆ. ಇನ್ನು ಮೂರು ಟನ್ ಇಳುವರಿ ಬರುವ ನಿರೀಕ್ಷೆ ಇದೆ. 1 ಸಾವಿರ ಕಂಬಗಳಲ್ಲಿ 4 ಸಾವಿರ ಗಿಡ ನೆಟ್ಟಿದ್ದೇನೆ'' ಎನ್ನುತ್ತಾರೆ.