ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಮಂಗಳೂರು: ರಾಜ್ಯದಲ್ಲಿ ಭಯೋತ್ಪಾದಕರ 15 ಸ್ಲೀಪರ್ ಸೆಲ್ಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ವಿರುದ್ಧ ನಮ್ಮ ರಾಜ್ಯದಲ್ಲಿ ದೊಡ್ಡ ಪ್ರಮಾಣದ ದಿಟ್ಟ ಕ್ರಮ ತೆಗೆದುಕೊಳ್ಳಲಾಗಿದೆ. 15 ಸ್ಲೀಪರ್ ಸೆಲ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅದು ನಿರಂತರ ಪ್ರಕ್ರಿಯೆಯಾಗಿದೆ. ಅವರಿಗೆ ಇರುವ ಸಂಪರ್ಕ, ಹಣಕಾಸಿನ ನೆರವಿನ ಬಗ್ಗೆ ತನಿಖೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ತನಿಖೆ ನಡೆಸುತ್ತಿದ್ದು, ನಮ್ಮ ಪೊಲೀಸರು ಮತ್ತು ಎನ್ಐಎ ಒಟ್ಟಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಶಿರಾಡಿ ಘಾಟ್ ದುರಸ್ತಿ ಬಗ್ಗೆ ವಾರದೊಳಗೆ ವಿಶೇಷ ಸಭೆ ಕರೆಯಲಾಗುವುದು. ಏನು ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಚರ್ಚಿಸಲಾಗುವುದು ಎಂದರು. ಮಹಾರಾಷ್ಟ್ರಕ್ಕೆ ಎಲ್ಲಾ ಬಸ್ಗಳು ಓಡಾಡುತ್ತಿವೆ. ಇನ್ನಷ್ಟು ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಡಿ.14 ರಂದು ಕೇಂದ್ರ ಗೃಹ ಸಚಿವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.
ಸೋಮವಾರ ನಂತರ ನಮ್ಮ ರಾಜ್ಯದ ಸಂಸದರು ಗೃಹಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಿದ್ದಾರೆ. ಕರ್ನಾಟಕ ಹಿತರಕ್ಷಣೆ ಮಾಡಲು ಸರ್ಕಾರ 100 ಶೇಕಡದಷ್ಟು ಬದ್ಧವಾಗಿದೆ. ಜೊತೆಗೆ ಮಹಾರಾಷ್ಟ್ರ ಕನ್ನಡಿಗರ ರಕ್ಷಣೆ ಮಾಡುತ್ತೇವೆ. ಪ್ರತಿ ಬಾರಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮರಾಠಿ ಸಮಾವೇಶ ಮಾಡಲು ಮುಂದಾಗುತ್ತಾರೆ. ಆದರೆ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದಲೇ ಕ್ರಮ.. ಗೃಹ ಸಚಿವ ಆರಗ ಜ್ಞಾನೇಂದ್ರ