ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ವಿವಾಹ ಔತಣಕೂಟಕ್ಕೆ ಆಗಮಿಸಿದ ವರ ಕೊರಗಜ್ಜನ ವೇಷ ಹಾಕಿ ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವರ ಮತ್ತು ಅವನ ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಳ್ನಾಡು ಗ್ರಾಮದಲ್ಲಿ ಯುವಕನೊಬ್ಬ ತನ್ನ ಮದುವೆಯ ಬಳಿಕ ವಧುವಿನ ಮನೆಗೆ ಆಗಮಿಸುವ ವೇಳೆ, ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಕುಣಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳಷ್ಟೇ ಅಲ್ಲ, ಮುಸ್ಲಿಂ ಸಮುದಾಯದವರೂ ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಸಹಿತ ವಿವಿಧ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಈ ಕೃತ್ಯವನ್ನು ಖಂಡಿಸಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.