ಕರ್ನಾಟಕ

karnataka

ETV Bharat / state

ಮಾನಸಿಕ ಅಸ್ವಸ್ಥನ ಬಾಳಲ್ಲಿ ಹೊಸ ಬೆಳಕು: ಸ್ನೇಹಾಲಯಕ್ಕೆ ಸೇರಿಸಿ ಮಾನವೀಯತೆ ಮೆರೆದ ಸುಬ್ರಹ್ಮಣ್ಯ ಜನತೆ - ಮಂಜೇಶ್ವರ

ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯ ಮೇಲೆ ದಿಕ್ಕು ದೆಸೆಯಿಲ್ಲದೆ ಜೀವನ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನೋರ್ವನ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಆತನನ್ನು ರಕ್ಷಣೆ ಮಾಡಿದ ಇಲ್ಲಿನ ಜನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Caring for a mentally ill youth at kutte subrama
Caring for a mentally ill youth at kutte subrama

By

Published : Jan 21, 2020, 8:43 PM IST

ದಕ್ಷಿಣ ಕನ್ನಡ/ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸೇತುವೆ ಮೇಲೆ ಸುಮಾರು ಮೂರು ತಿಂಗಳುಗಳಿಂದ ಜಾಕೆಟ್ ಹಾಕಿಕೊಂಡು ಮೈಮೇಲೆ ಸಿಕ್ಕ ಸಿಕ್ಕ ಬಟ್ಟೆಗಳನ್ನು ಹೊದ್ದುಕೊಂಡು, ಹರಿದ ಬಟ್ಟೆಗಳ ಮೂಲಕ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನೋರ್ವನಿಗೆ ಇಲ್ಲಿನ ಜನ ಹೊಸ ರೂಪ ಕೊಟ್ಟಿದ್ದಾರೆ. ಆತನನ್ನು ರಕ್ಷಣೆ ಮಾಡಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಈತ ಹಿಂದಿಯಲ್ಲಿ ಮಾತನಾಡುತ್ತ ಅಕ್ಕ ಪಕ್ಕದ ಹೋಟೆಲ್​ನವರು ಕೊಡುವ ಆಹಾರ ತಿನ್ನುತ್ತ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಲ್ಲಿ ಗಲಾಟೆ ಮಾಡಿ ದುಡ್ಡು ಕೊಡಿ ಎಂದು ಕೇಳುತ್ತಿದ್ದ. ಯುವಕನ ಈ ವರ್ತನೆ ನೋಡಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಭಯಪಡುತ್ತಿದ್ದರು. ಹಲವು ಬಾರಿ ಕೆಲವು ಪ್ರವಾಸಿಗರು ಈ ಮಾನಸಿಕ ರೋಗಿಗೆ ಹೊಡೆದ ಸನ್ನಿವೇಶಗಳೂ ನಡೆದಿವೆಯಂತೆ.

ದಿಕ್ಕು ದೆಸೆಯಿಲ್ಲದ ಮಾನಸಿಕ ಅಸ್ವಸ್ಥನಿಗೆ ಸಹಾಯ ಹಸ್ತ ಚಾಚಿದ ಸುಬ್ರಹ್ಮಣ್ಯ ಜನತೆ

ರಾತ್ರಿ ಹಗಲೆನ್ನದೆ ಬಿಸಿಲಿನಲ್ಲಿ ಅಲೆದಾಡುತ್ತ, ಕುಮಾರಧಾರಾ ಸೇತುವೆಯ ಮೇಲೆ ಮಲಗುತ್ತಿದ್ದ. ಈತನನ್ನು ಗಮನಿಸಿದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಪೊಲೀಸ್ ಸಿಬ್ಬಂದಿ ಸಂಧ್ಯಾ ಮಣಿ, ಸುಬ್ರಹ್ಮಣ್ಯದ ಕೆಲವು ಮಾಧ್ಯಮ ವರದಿಗಾರರು ಸೇರಿ ಈತನನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರಕ್ಕೆ ದಾಖಲಿಸುವ ಮೂಲಕ ಅಸ್ವಸ್ಥ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರದ ಮುಖ್ಯಸ್ಥ ಜೋಸೆಫ್, ಸಿಬ್ಬಂದಿಗಳಾದ ಜೋವಿಯಲ್, ಸಂದೀಪ್, ಆಲ್ವಿನ್ ಅವರ ಮುತುವರ್ಜಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನಿಗೆ ಕ್ಷೌರ ಮಾಡಿ, ಊಟ ತಿಂಡಿ ಕೊಟ್ಟು ಆರೈಕೆ ಮಾಡಲಾಗುತ್ತಿದೆ. ಯುವಕ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಮನೆಯವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುವುದು ಎಂದು ಸ್ನೇಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details