ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪ ಇರುವ ಮೂಡುಕೊಣಾಜೆಯ ಬೃಹತ್ ಶಿಲಾಯುಗದ ನಿವೇಶನದಲ್ಲಿನ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆಯಾಗಿವೆ.
ಹರಪ್ಪಾ ನಾಗರೀಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕೃತಿಯ ನಂತರ, ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು ಭಾರತೀಯ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದ ಮಹತ್ವಪೂರ್ಣ ಪ್ರಾಚ್ಯಾವಶೇಷಗಳಾಗಿವೆ. ಹಾಗೂ ತುಳುನಾಡಿನ ಮಾತೃಮೂಲೀಯ ಸಾಮಾಜಿಕ ವ್ಯವಸ್ಥೆಯ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳು ಎಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಟಿ. ಮುರುಗೇಶಿ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ, ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆಯ ಎರಡು ಶಿಲ್ಪಗಳು ಪತ್ತೆಯಾಗಿವೆ. ಕೈಯಿಂದ ತಯಾರಿಸಿದ ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳ ಸ್ತ್ರೀತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ. ಇಂತಹ ಏಕೈಕ ಶಿಲ್ಪ ಕೇರಳದ ಮಲಪ್ಪುರದ ಬೃಹತ್ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿದೆ. ಇದರ ಹೊರತು ಭಾರತದ ಯಾವುದೇ ನಿವೇಶನದಲ್ಲಿ ಇಂತಹ ಶಿಲ್ಪಗಳು ಪತ್ತೆಯಾಗಿಲ್ಲ. ಆದರೆ, ಇಂತಹ ಶಿಲ್ಪಗಳು ಈಜಿಪ್ಟ್ ನಲ್ಲಿ ವ್ಯಾಪಕವಾಗಿ ಕಂಡು ಬಂದಿವೆ ಎಂದು ಅವರು ತಿಳಿಸಿದ್ದಾರೆ.