ಮಂಗಳೂರು:ನಗರವನ್ನು ನಿನ್ನೆ ಪ್ರವೇಶಿಸಿದ್ದ ಕಾಡುಕೋಣವು ಅರಿವಳಿಕೆ ಹೆಚ್ಚಾಗಿ ಮೃತಪಟ್ಟಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಈ ಕಾಡುಕೋಣ ಗುಂಪಿನಿಂದ ಬೇರೆಯಾದ ಒತ್ತಡ ಹಾಗೂ ಒಂಟಿಯಾಗಿ ಬೆದರಿ ಓಡೋಡಿ ಸುಸ್ತಾಗಿರುವುದರಿಂದ ಸತ್ತಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಿಲಿಕುಳ ನಿಸರ್ಗಧಾಮದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ.
'ಮಂಗಳೂರಿನಲ್ಲಿ ಕಾಡುಕೋಣ ಅರಿವಳಿಕೆ ಮದ್ದು ನೀಡಿದ್ದರಿಂದ ಸತ್ತಿಲ್ಲ'
ಕಾಡಿನಿಂದ ಮಂಗಳೂರು ನಗರ ಪ್ರವೇಶಿಸಿದ್ದ ಕಾಡುಕೋಣ ಅರಿವಳಿಕೆ ಹೆಚ್ಚಾಗಿ ಸಾವನ್ನಪ್ಪಿಲ್ಲ ಎಂದು ಪಿಲಿಕುಳ ನಿಸರ್ಗಧಾಮದ ಹಿರಿಯ ವೈಜ್ಞಾನಿಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯ ಪರಿಸ್ಥಿತಿ ಬೇರೆಯಾಗಿದ್ದು ಒಂದು ಕಡೆ ಪ್ರಾಣಿಯನ್ನು ರಕ್ಷಿಸುವ ಮತ್ತು ಇನ್ನೊಂದು ಕಡೆ ಜನರ ಪ್ರಾಣ ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳಿಗಿತ್ತು. ಒಂದು ವೇಳೆ ಮದ್ದು ನೀಡದೇ ಇದ್ದಲ್ಲಿ ಕಾಡುಕೋಣ ಜನನಿಬಿಡ ಪ್ರದೇಶದಲ್ಲಿ ಓಡಾಡಬಹುದು ಎಂಬ ಭೀತಿ ಇತ್ತು. ಸಾಮಾನ್ಯವಾಗಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ಅರೆವಳಿಕೆ ಮದ್ದು ಚುಚ್ಚಿದ ನಂತರ ಚಿಕಿತ್ಸೆಗಳನ್ನು ಮುಗಿಸಿ ಅವುಗಳು ಎಚ್ಚರ ಆಗುವರೆಗೆ ಆರೈಕೆ ನೀಡಲಾಗುತ್ತದೆ. ಸಹಜ ಸ್ಥಿತಿಗೆ ಬಂದ ಬಳಿಕ ಅವುಗಳನ್ನು, ವಾಹನದಲ್ಲಿರಿಸಿ ಒಂದಷ್ಟು ಹೊತ್ತು ತಿರುಗಿಸಲಾಗುತ್ತದೆ. ದಾರಿ ಮಧ್ಯೆ ಅವುಗಳ ಮೈಮೇಲೆ ನೀರನ್ನು ಸಿಂಪಡಿಸುತ್ತಾ, ಕುಡಿಯಲು ನೀರು ಕೊಡುತ್ತಾ ರಾತ್ರಿ ಸಮಯದಲ್ಲಿ ಸಾಗಿಸುವುದು ರೂಢಿ.
ಆದ್ರೆ, ನಿನ್ನೆಯ ಪ್ರಕರಣದಲ್ಲಿ ಅಂತಹ ಕ್ರಮವನ್ನು ಪಾಲಿಸುವುದು ಕಷ್ಟವಾಗಿತ್ತು. ತುರ್ತಾಗಿ ಹಗಲು ಹೊತ್ತಿನ ಎರಡು ಗಂಟೆಗಳ ಲಾರಿ ಪ್ರಯಾಣ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಅರಿವಳಿಕೆ ನೀಡಿದ ಬಳಿಕ ಸಾಗಾಟ ಆರಂಭದ ಬಳಿಕ ಉಸಿರಾಟ ಸರಿಯಾಗಿ ನಡೆಯುತ್ತಿತ್ತು ಎಂದು ಹೇಳಿದರು.
ಆದರೆ ಕಾಡು ಕೋಣವು ಗುಂಪಿನಿಂದ ಬೇರೆಯಾದ ಒತ್ತಡದಿಂದ ಹಾಗೂ ಸಾಕಷ್ಟು ಓಡಾಡಿ, ಬೆದರಿದ ಪರಿಣಾಮ ಮೃತಪಟ್ಟಿರಬಹುದು ಎಂದು ವಿಕ್ರಮ್ ಹೇಳಿದ್ದಾರೆ.