ಮಂಗಳೂರು:ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ದೋಷಮುಕ್ತರು ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ವಿಠಲ ಮಲೆಕುಡಿಯ ಹಾಗೂ ತಂದೆ ಲಿಂಗಣ್ಣ ಮಲೆಕುಡಿಯ ದೋಷಮುಕ್ತ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಯಾಗಿರುವ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಅವರಿಗೆ ನಕ್ಸಲ್ ನಂಟು ಇದೆ ಎಂದು 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ದಳ ಬಂಧಿಸಿತ್ತು. ಬಂಧನದ ವೇಳೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪುಸ್ತಕ ಸೇರಿದಂತೆ ಒಂದು ಬೈನಾಕುಲರ್ ಹಾಗೂ ದಿನಬಳಕೆಯ ವಸ್ತುಗಳಾದ ಚಾಹುಡಿ, ಸಕ್ಕರೆಯನ್ನು ಸೇರಿದಂತೆ 36 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಆಧಾರದ ಮೇಲೆ ರಾಜದ್ರೋಹ ಹಾಗೂ ಕಾನೂನು ಬಾಹಿರ ನಕ್ಸಲ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿತ್ತು. ಇದರಲ್ಲಿ ವಿಠಲ ಮಲೆಕುಡಿಯ ಬರೆದಿರುವ 'ಚುನಾವಣೆ ಬಹಿಷ್ಕಾರ' ಬರವಣಿಗೆಯನ್ನು ದೇಶದ್ರೋಹ ಎಂಬ ಪಟ್ಟಿಗೆ ಸೇರಿಸಿದ್ದಾರೆ.
ಕೈಕೋಳ ಧರಿಸಿಯೇ ಪದವಿ ಪರೀಕ್ಷೆ ಬರೆದಿದ್ದ ವಿಠಲ ಮಲೆಕುಡಿಯ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಕ್ಸಲ್ ನಿಗ್ರಹ ಪಡೆಯ ಅಂದಿನ ಎಎಸ್ಪಿ ಎಂಎನ್ ಅನುಚೇತನ್ ಅವರು ಈ ಬಗ್ಗೆ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೋಷಾರೋಪಣ ಪಟ್ಟಿಯಲ್ಲಿ ವಿಠಲ ಮಲೆಕುಡಿಯ ಆರನೇ ಆರೋಪಿಯಾಗಿ ಹಾಗೂ ಅವರ ತಂದೆ ಲಿಂಗಣ್ಣ ಏಳನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು.
ಸಿಪಿಎಂ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡಿದ್ದ ವಿಠಲ ಮಲೆಕುಡಿಯ ಬಂಧನದ ವೇಳೆ ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಂದರ್ಭದಲ್ಲಿಯೇ ಕೈಕೋಳ ಧರಿಸಿಯೇ ವಿಠಲ ಪತ್ರಿಕೋದ್ಯಮ ಪದವಿ ಪರೀಕ್ಷೆ ಬರೆದಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿಯವರು ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ. ವಕೀಲ ದಿನೇಶ್ ಹೆಗ್ಡೆ ಉಳೇಪಾಡಿಯವರು ವಾದಿಸಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಆಪ್ತನಿಗೆ ಕೊಕ್.. ಬುಡಾ ಅಧ್ಯಕ್ಷ ಸ್ಥಾನಕ್ಕೆ ಅಭಯ್ ಪಾಟೀಲ್ ಬೆಂಬಲಿಗನಿಗೆ ಮಣೆ!