ಪುತ್ತೂರು:ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿನ ಅರ್ತ್ ಮೂವರ್ಸ್ ಸಂಸ್ಥೆಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಯುವಕನೊಬ್ಬನನ್ನು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮೂವರು ಸೇರಿಕೊಂಡು, ಅಪಹರಿಸಿ ಕೊಲೆ ಮಾಡಿದ್ದಾರೆ. ಆಗುಂಬೆ ಘಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಶುಕ್ರವಾರ ಸಂಜೆ ಪೊಲೀಸರು ಪತ್ತೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ನಿವಾಸಿ ಸುರೇಸ ಮತ್ತು ರೇಣಪ್ಪ ಮಾದರ ದಂಪತಿ ಪುತ್ರ ಹನುಮಂತಪ್ಪ (22) ಕೊಲೆಯಾದ ಯುವಕ. ಬಂಧಿತ ಆರೋಪಿಗಳು ಹನುಮಂತಪ್ಪನನ್ನು ದಾರಿ ಮಧ್ಯೆ ಕೊಲೆಗೈದು ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದಿರುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ತನ್ನ ಸ್ನೇಹಿತನ ರೂಮಿನಲ್ಲಿ ವಾಸ್ತವ್ಯವಿದ್ದ ಹನುಮಂತ ಅವರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ನಿವಾಸಿಗಳಾದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥ ಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ಎಂಬವರು ಕಳೆದ ನವಂಬರ್ 17ರಂದು ಸಂಜೆ ಮಹೇಂದ್ರ ಮ್ಯಾಕ್ಸಿಂ ವಾಹನವೊಂದರಲ್ಲಿ ಅಪರಿಸಿಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ದೇಹದ ಅಸ್ತಿಪಂಜರ ಪತ್ತೆ:ಘಟನೆಯ ಕುರಿತು ಮೃತನ ತಾಯಿ ರೇಣವ್ವ ಮಾದರ ಅವರು ನೀಡಿದ್ದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಆರಂಭಿಸಿದ್ದ ಪ್ರಭಾರ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ ಎಸ್ ಅವರ ನೇತೃತ್ವದ ಸಂಪ್ಯ ಪೊಲೀಸ್ ತಂಡ ಹನುಮಂತ ಅವರನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆ ಮಾಡಿ, ವಿಚಾರಣೆಗೊಳಪಡಿಸಿದ ವೇಳೆ ಕೊಲೆ ಮಾಡಿರುವ ವಿಚಾರವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಪೊಲೀಸರು ಶುಕ್ರವಾರ ಮೃತದೇಹದ ಪತ್ತೆಗಾಗಿ ಹಂತಕರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಎಸೆದ ಸ್ಥಳದಲ್ಲಿ ದೇಹದ ಅಸ್ತಿಪಂಜರವನ್ನು ಪತ್ತೆ ಹಚ್ಚಿದ್ದರು.
ಈ ಕುರಿತು ತಮ್ಮ ಮಂಜುನಾಥ ಹನುಮಂತ ಹಾಗೂ ಆ ಮೂವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪುತ್ರ ಮನೆಗೆ ಬಾರದಿರುವ ಹಾಗೂ ಮೊಬೈಲ್ ಕರೆಗೂ ಸಿಗದಿರುವುದರಿಂದ ನ. 19ರಂದು ಬಾದಾಮಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಅಲ್ಲಿನ ಪೊಲೀಸರು ಪುತ್ತೂರು ಗ್ರಾಮಾಂತರ ಠಾಣೆಗೆ ಹೋಗಿ ದೂರು ನೀಡಲು ತಿಳಿಸಿದ್ದರು ಎಂದು ಹನುಮಂತ ಅವರ ತಾಯಿ ರೇಣವ್ವ ಮಾದರ ಅವರು ನ. 20ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಹನುಮಂತನ ಪತ್ತೆ ಮಾಡಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿಕೊಂಡಿದ್ದರು. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಇದನ್ನೂ ಓದಿ :3 ವರ್ಷಗಳ ಹಿಂದೆ ಮಹಿಳೆ ಕೊಲೆ: ಪತಿ, ಅಪಹರಣದ ಕಥೆ ಹೆಣೆದ ಸಹೋದರು ಸೇರಿ ಐವರು ಸೆರೆ