ಮಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಣಕಾಸು ವ್ಯವಹಾರಕ್ಕೆ ಕೊಲೆ ಯತ್ನ: ಮಂಗಳೂರಿನಲ್ಲಿ 7 ಮಂದಿ ಅಂದರ್ - ಮಂಗಳೂರು ಸಿಸಿಬಿ ಪೊಲೀಸರು
ಇಬ್ಬರ ಕೊಲೆಗೆ ಯತ್ನಿಸಿ ತಲೆ ಮರೆಸಿಕೊಂಡಿದ್ದ 7 ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಕಂಕನಾಡಿಯ ಅಬ್ದುಲ್ ಜಬ್ಬಾರ್, ಪರಂಗಿಪೇಟೆಯ ನಜೀರ್ ಅಹ್ಮದ್, ಫಳ್ನೀರ್ ಬಿಲಾಲ್ ಮೊಯ್ದೀನ್, ಮುಳಿಹಿತ್ಲುವಿನ ಇಬ್ರಾಹೀಂ ಶಾಕೀರ್, ಅತ್ತಾವರದ ಮೊಹಮ್ಮದ್ ನಿಹಾಲ್, ಪಾಂಡೇಶ್ವರದ ಅಬ್ಬಾಸ್ ಅಫ್ವಾನ್, ಮೊಹಮ್ಮದ್ ಅತಿಂ ಇಶಾಂ ಬಂಧಿತ ಆರೋಪಿಗಳು. ಇವರು ಕಂದಾವರ ಮಸೀದಿ ಬಳಿ ರಾತ್ರಿ 10.30 ಸುಮಾರಿಗೆ ಮನೆಗೆ ಹೋಗುತ್ತಿದ್ದ ಅಬ್ದುಲ್ ಅಜೀಜ್ ಎಂಬಾತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಅಜೀಜ್ರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಆರೈಕೆಗೆ ತಂಗಿ ಮಗ ಮಕ್ದೂಮ್ ಇದ್ದ. ಅಝೀಜ್ ಮಗಳ ಗಂಡ ನೌಶಾದ್ ಜೊತೆ ಆಸ್ಪತ್ರೆಯ ಗೇಟ್ ಬಳಿ ನಿಂತು ಮಾತನಾಡುತ್ತಿದ್ದ. ಇದೇ ವೇಳೆ, ಅಲ್ಲಿಗೆ ಬಂದ ಆರೋಪಿಗಳಿಬ್ಬರು ಮಕ್ದೂಮ್ ಎಂದು ಭಾವಿಸಿ ನೌಶಾದ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಎರಡು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್.10ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.