ಮಂಗಳೂರು (ದಕ್ಷಿಣ ಕನ್ನಡ):ಆಷಾಢ ಮಾಸವನ್ನು ತುಳುವರು ಆಟಿ ಎನ್ನುವರು. ಈ ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯಂದು ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಆಟಿ ಕಷಾಯ ಸೇವನೆ ಮಾಡುವ ಸಂಪ್ರದಾಯವಿದೆ. ಆಟಿ ಅಮಾವಾಸ್ಯೆಯಂದು ಕುಡಿಯುವ ಆಟಿ ಕಷಾಯದ ಬಗ್ಗೆ ನಿಮಗೆ ಗೊತ್ತೇ?
ತುಳುವರು ಆಹಾರದಲ್ಲಿಯೇ ಔಷಧವನ್ನು ಸೇವಿಸುತ್ತಾರೆ. ಯಾವ ವಸ್ತುವಿನಲ್ಲಿ ಯಾವ ರೀತಿಯ ಔಷಧೀಯ ಗುಣವಿದೆ ಎನ್ನುವ ಸಂಗತಿ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಮರ, ತೊಗಟೆ, ಹುಲ್ಲು, ಪಥ್ಯ ಹಾಗು ಆಹಾರದಲ್ಲಿ ರೋಗಗಳನ್ನು ಗುಣಪಡಿಸುವ ವಿಧಾನವಿದು. ಆದ್ದರಿಂದ ತುಳುವರಿಗೆ ಮದ್ದು ಮಾಡುವ ವಿಧಾನ, ಆಹಾರ ಪದ್ಧತಿ ಒಂದು ಸಂಸ್ಕೃತಿ ಎನ್ನಲು ಅಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ರೋಗ ನಿರೋಧಕವಾಗಿ ಹಾಲೆ ಮರದ ತೊಗಟೆಯ ರಸವನ್ನು ಔಷಧವಾಗಿ ಸೇವಿಸುವ 'ಆಟಿ ಅಮಾವಾಸ್ಯೆ' ಆಚರಣೆ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.
ತುಳುನಾಡು ಎಂದು ಪರಿಗಣಿತವಾದ ಕಾಸರಗೋಡು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾದ್ಯಂತ ಇಂದು ತುಳುವರು ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡುತ್ತಿದ್ದಾರೆ. ಹಾಲೆ ಮರದ ರಸದ ಕಷಾಯ ಸೇವಿಸುತ್ತಾರೆ. ತುಳುವರಿಗೆ (ಸೌರಮಾನ ಪದ್ಧತಿಯಂತೆ) ನಾಲ್ಕನೇಯ ತಿಂಗಳು ಕರ್ಕಾಟಕ ಮಾಸ. ಇದನ್ನು ತುಳುವರು ಆಟಿ (ಆಷಾಢ) ಎಂದು ಕರೆಯುತ್ತಾರೆ.
ಇದು ಜುಲೈ-ಆಗಸ್ಟ್ ಮಧ್ಯದ ಕಾಲ. ಆಟಿ ತಿಂಗಳೆಂದರೆ ವಿಪರೀತ ಮಳೆ ಬರುವ ಕಾಲವೇ. ಅದೇ ರೀತಿ ಸಾಂಕ್ರಾಮಿಕ ರೋಗಗಳೂ ಉಲ್ಬಣವಾಗುವುದುಂಟು. ಆದ್ದರಿಂದ ಆಟಿ ಅಮಾವಾಸ್ಯೆಯ ದಿನದಂದು ಮದ್ದುಗಳೆಲ್ಲವೂ ಹಾಲೆ ಮರದಲ್ಲಿ ಐಕ್ಯವಾಗುತ್ತದೆ ಎಂಬುದು ತುಳುವರ ನಂಬಿಕೆ. ಕರಾವಳಿ ಜಿಲ್ಲೆಯಲ್ಲಿ ಅಬಾಲ ವೃದ್ಧರಾದಿಯಾಗಿ ಅಂದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲೆ ಮರದ ತೊಗಟೆಯ ಕಷಾಯ ಸೇವಿಸುವುದುಂಟು. ಈ ಕಷಾಯ ಸೇವನೆ ಮಾಡಿದ್ದಲ್ಲಿ ಮುಂದೆ ಯಾವುದೇ ರೋಗ-ರುಜಿನಗಳು ಬಾಧಿಸದು ಎನ್ನುವುದು ನಂಬಿಕೆ.
ಹಾಲೆ ಮರದ ಕಷಾಯ ಮಾಡುವುದು ಹೇಗೆ?:ಈ ಹಿಂದೆ ಆಟಿ ಅಮಾವಾಸ್ಯೆಯ ಹಿಂದಿನ ದಿನವೇ ಮನೆಯ ಯಜಮಾನ ಹಾಲೆ ಮರ ಇರುವ ಕಾಡಿಗೋ, ಗುಡ್ಡಕ್ಕೆ ತೆರಳಿ ಹಾಲೆ ಮರದ ಬುಡದಲ್ಲಿ 'ವೀಳ್ಯದೆಲೆ' ಮತ್ತು 'ಬೆಣಚು ಕಲ್ಲು' ಇರಿಸಿ ಎಲ್ಲ ಮದ್ದುಗಳೂ ಈ ಮರದಲ್ಲಿ ಬಂದು ಸೇರಲಿ, ನಾಳೆ ನಾನು ನಿನ್ನಲ್ಲಿಗೆ ಬರುವಾಗ ನೀನು ಮದ್ದು ನೀಡಬೇಕು ಎಂದು ಪ್ರಾರ್ಥಿಸಿ, ನೂಲು ಕಟ್ಟಿ ಪ್ರಾರ್ಥನೆ ಮಾಡಿ ಬರುತ್ತಾನೆ. ಮರುದಿನ ಮೈಮೇಲೆ ನೂಲೆಳೆಯ ಬಟ್ಟೆಯನ್ನೂ ಧರಿಸದೇ ನಗ್ನರಾಗಿಯೇ ಮರದ ಬುಡಕ್ಕೆ ತೆರಳಿ ಅದರ ತೊಗಟೆಯನ್ನು ಜಜ್ಜಿ ತೆಗೆಯಲಾಗುತ್ತಿತ್ತು. ಆದರೆ ಈಗ ಈ ಪದ್ಧತಿ ಕಡಿಮೆ.
ಆಟಿ ಅಮಾವಾಸ್ಯೆಯಂದು ನಸುಕಿನ ಜಾವದಲ್ಲೆದ್ದು, ಹಾಲೆ ಮರ ಇರುವಲ್ಲಿಗೆ ಹೋಗಿ ಕತ್ತಿ, ಕಬ್ಬಿಣ ಇನ್ನಿತರ ಯಾವುದೇ ಸಾಧನ ಬಳಸದೇ ಬೆಣಚು ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆಯಲಾಗುತ್ತದೆ. ಈ ತೊಗಟೆಯನ್ನು ಮನೆಗೆ ತಂದು ಅದರ ಸಿಪ್ಪೆ ತೆಗೆದು ಅರೆಯುವ ಕಲ್ಲಿನಲ್ಲಿ ಅರೆದೋ, ಕಡೆದೋ ಅಥವಾ ಜಜ್ಜಿಯೋ ರಸ ತೆಗೆಯುತ್ತಾರೆ. ಹೀಗೆ ರಸ ತೆಗೆಯುವಾಗ ಜೊತೆಗೆ ಬೆಳ್ಳುಳ್ಳಿ, ಶುಂಠಿ, ಕರಿಮೆಣಸು, ಓಮ ಇತ್ಯಾದಿಯನ್ನು ಬೆರೆಸುತ್ತಾರೆ. ಕೊನೆಗೆ ಕಂದು ಬಣ್ಣದ ಕಷಾಯ ರೆಡಿಯಾಗುತ್ತದೆ. ಈ ಕಷಾಯಕ್ಕೆ ಕೆಂಡದಲ್ಲಿ ಕಾದು ಬಿಸಿಯಾದ ಬೆಣಚುಕಲ್ಲನ್ನು ಮುಳಗಿಸಿ ಒಗ್ಗರಣೆ ಹಾಕಲಾಗುತ್ತದೆ. ಬಳಿಕ ಇದನ್ನು ಮನೆ ಮಂದಿಯೆಲ್ಲ ಔಷಧದಂತೆ ಸೇವನೆ ಮಾಡುತ್ತಾರೆ.
ಕಹಿಯಾದ ಈ ಕಷಾಯವನ್ನು ಸೇವನೆ ಮಾಡುವಾಗ ಜೊತೆಗೆ ಒಂದು ತುಂಡು ಓಲೆ ಬೆಲ್ಲವನ್ನೂ ಸೇವನೆ ಮಾಡುವುದುಂಟು. ಹಾಲೆ ಮರದ ತೊಗಟೆಯ ಕಷಾಯ ದೇಹಕ್ಕೆ ವಿಪರೀತ ಉಷ್ಣವಾದ ಕಾರಣ ಕಷಾಯ ಕುಡಿದ ಬಳಿಕ ಮೆಂತೆಯ ಗಂಜಿ ಮಾಡಿ ಸೇವಿಸಲಾಗುತ್ತದೆ. ಇದರಿಂದ ಉಷ್ಣವೇರಿದ ದೇಹ ತಂಪಾಗುತ್ತದೆ. ಇದು ತುಳುವರು ಆಹಾರದಲ್ಲಿಯೇ ಔಷಧವನ್ನು ಬಳಸುವ ವಿಶಿಷ್ಟ ಪದ್ಧತಿ.
ವಿಶೇಷವೆಂದರೆ, ಹಾಲೆಮರದ ತೊಗಟೆಯ ಕಷಾಯವನ್ನು ವರ್ಷಕ್ಕೊಮ್ಮೆ ಬರುವ ಆಟಿ ಅಮಾವಾಸ್ಯೆಯಂದು ಮಾತ್ರ ಕುಡಿಯಲಾಗುತ್ತದೆ. ಬೇರೆ ಯಾವುದೇ ಸಮಯದಲ್ಲಿಯೂ ಇದರ ಕಷಾಯ ಸೇವಿಸುವುದಿಲ್ಲ. ಈ ಮೂಲಕ ಹಾಲೆಮರದ ಕಷಾಯ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಔಷಧವಾಗಿ ಸೇವಿಸುವ ಕ್ರಮವಾಗಿ ಆಚರಿಸಲ್ಪಡುತ್ತದೆ.
ಇದನ್ನೂ ಓದಿ:ಆಟಿ ಮಾಸ.. ಕರಾವಳಿಯಲ್ಲಿ ಪ್ರೇತಗಳಿಗೆ ಕೂಡಿ ಬರುತ್ತೆ ಕಂಕಣ ಭಾಗ್ಯ