ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತೆಯ ಅಂತ್ಯಕ್ರಿಯೆಯಲ್ಲಿ 150 ಮಂದಿ ಭಾಗಿ: ನಿಯಮ ಉಲ್ಲಂಘಿಸಿ ಶವಸಂಸ್ಕಾರ

ಮಂಗಳೂರು ನಗರದ ವೃದ್ಧೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿ ಬರುವ ಮುನ್ನವೇ ವೃದ್ಧೆ ಸಾವನ್ನಪ್ಪಿದ್ದರು. ಮೃತದೇಹವನ್ನು ಕೊಂಡೊಯ್ದ ಕುಟುಂಬಸ್ಥರು 150 ಜನರೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಂತರ ವೃದ್ಧೆಗೆ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

Corona
ಸಾಂದರ್ಭಿಕ ಚಿತ್ರ

By

Published : Jul 30, 2020, 1:46 PM IST

ಮಂಗಳೂರು: ನಗರದಲ್ಲಿ ಈ ಹಿಂದೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಬೋಳೂರಿನಲ್ಲಿ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರ ನಿಯಮ ಮೀರಿ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.

ಬೋಳೂರಿನ 80 ವರ್ಷದ ವೃದ್ಧೆಯೊಬ್ಬರು ಕಳೆದ ಭಾನುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರಿಗೆ ಕೊರೊನಾ ಮತ್ತು ಮಲೇರಿಯಾ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಮಲೇರಿಯಾ ಇರುವುದು ದೃಢಪಟ್ಟಿದ್ದು, ಕೊರೊನಾದ ವರದಿ ಬಂದಿರಲಿಲ್ಲ. ವರದಿ ಬರುವ ಮುನ್ನವೇ ಹೃದಯಾಘಾತದಿಂದ ವೃದ್ಧೆ ಸಾವನ್ನಪ್ಪಿದ್ದರು. ತಮ್ಮ ಪ್ರಭಾವ ಬಳಸಿದ ಮನೆಯವರು, ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಸಂಪ್ರದಾಯಬದ್ಧವಾಗಿ 150 ‌ಮಂದಿ ಒಗ್ಗೂಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಇದಾದ ಬಳಿಕ ಮೃತಳಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಆತಂಕಗೊಂಡಿದ್ದು, ಕೆಲವರು ಸ್ವಯಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ, ಘಟನೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವ್ಯಕ್ತಿಯೊಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ ಬಳಿಕ ಅವರು ಮೃತಪಟ್ಟರೆ ಯಾವುದೇ ಕಾರಣಕ್ಕೂ ಕೊರೊನಾ ವರದಿ ಬರುವ ಮುನ್ನ ಮೃತದೇಹ ಹಸ್ತಾಂತರಿಸಬಾರದು. ಕುಟುಂಬದವರ ಒತ್ತಡಕ್ಕೆ ಮಣಿದ ಆಸ್ಪತ್ರೆ ಸಿಬ್ಬಂದಿ, ಕೊರೊನಾ ವರದಿ ಬರುವ ಮುನ್ನವೇ ಕುಟುಂಬಿಕರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಯಾರಾದರೂ ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details