ಮಂಗಳೂರು:ಇಲ್ಲಿನ ಪಡೀಲ್ ಕಣ್ಣೂರಿನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯನ್ನು ಕಂಟೈನ್ಮೆಂಟ್ ಝೋನ್ಗೆ ಸೇರಿಸಿ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಅತ್ತೆಗೆ ಪಾರ್ಶ್ವವಾಯು ಆಗಿತ್ತು. ಹಾಗಾಗಿ ಅವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೈಕೆಗೆ ಮಹಿಳೆ ಆಸ್ಪತ್ರೆಗೆ ಬರುತ್ತಿದ್ದರು. ಈ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಕೊರೊನಾ ದೃಢಪಟ್ಟಿರುವುದರಿಂದ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಕಂಟೈನ್ಮೆಂಟ್ ಝೋನ್ ಎಂದು ಮಾಡಲಾಗಿದೆ. ಆಸ್ಪತ್ರೆಯ ನಾಲ್ಕು ದಿಕ್ಕಿನಲ್ಲಿರುವ ಕನ್ನಡಗುಡ್ಡೆ, ರಮನಾಥ ಕೃಪ ರೈಸ್ ಮಿಲ್, ರಾಷ್ಟ್ರೀಯ ಹೆದ್ದಾರಿ ಮತ್ತು ಚರಂಡಿ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಮಾಡಲಾಗಿದೆ. ಈ ಪ್ರದೇಶದಲ್ಲಿ ಆಸ್ಪತ್ರೆ ಹೊರತುಪಡಿಸಿ 2 ಮನೆ, 5 ಅಂಗಡಿ ಇದ್ದು, 16 ಮಂದಿ ವಾಸವಿದ್ದಾರೆ.
ಆಸ್ಪತ್ರೆಯ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಮಾಡಲಾಗಿದೆ. ಇದಲ್ಲದೆ ಆಸ್ಪತ್ರೆ ಸುತ್ತಲಿನ ಮಂಗಳೂರಿನ ಕಲ್ಲಾಪು, ಫಳ್ನೀರ್, ಕುಡುಪು ಮತ್ತು ಬಂಟ್ವಾಳ ತಾಲೂಕಿನ ಫರಂಗಿಪೇಟೆಯೊಳಗಿನ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ 41,900 ಮನೆಗಳು, 1808 ಅಂಗಡಿ, ಕಚೇರಿಗಳು ಇದ್ದು, 1,82,500 ಮಂದಿ ಜನರು ವಾಸಿಸುತ್ತಿದ್ದಾರೆ.